ನಾಯಕನಹಟ್ಟಿ: ಸಮೀಪದ ರೇಖಲಗೆರೆ ಅಮೃತ್ ಮಹಲ್ ಕಾವಲಿನ ಸುಮಾರು 1,500 ಎಕರೆ ಜಮೀನಿನಲ್ಲಿ ಸರ್ಕಾರ ಗಿಡಗಳನ್ನು ಬೆಳೆಸಲು ಮಾತ್ರ ಅನುಮತಿ ನೀಡಿದ್ದರೂ, ದೇನಾ ಭಗತ್ ಟ್ರಸ್ಟ್ ಅಲ್ಪ ಪ್ರಮಾಣದ ಗಿಡಗಳನ್ನು ಬೆಳೆಸಿ ಉಳಿದ ಭೂಮಿಯಲ್ಲಿ ಅಡಿಕೆ ಗಿಡಗಳನ್ನು ನೆಟ್ಟು, ಕಟ್ಟಡಗಳನ್ನು ನಿರ್ಮಿಸಿ ಗುಂಡಿಗಳನ್ನು ತೆಗೆಯುತ್ತಿರುವುದು ಅನ್ಯಾಯವಾಗಿದೆ ಎಂದು ರೇಖಲಗೆರೆ ಚಿನ್ನಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಹೋಬಳಿಯ ರೇಖಲಗೆರೆ ಅಮೃತ್ ಮಹಲ್ ಕಾವಲಿಗೆ ಚಳ್ಳಕೆರೆ ತಾಲ್ಲೂಕಿನ ಪಶುವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಸರ್ಕಾರದಿಂದ ದೇನಾ ಭಗತ್ ಟ್ರಸ್ಟ್‌ಗೆ ಗಿಡಗಳನ್ನು ಬೆಳೆಸಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ ದೇನಾ ಭಗತ್ ಸ್ವಾಮೀಜಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸುವುದು, ಗುಂಡಿಗಳನ್ನು ತೆಗೆಯುವುದು ಹಾಗೂ ಅಡಿಕೆ ಗಿಡಗಳನ್ನು ನೆಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಗ್ರಾಮದಲ್ಲಿ ಬಡವರು ಮತ್ತು ನಿರ್ಗತಿಕರು ಹೆಚ್ಚಿದ್ದು, ಕುರಿ-ಮೇಕೆ ಸೇರಿದಂತೆ ಜಾನುವಾರುಗಳನ್ನು ಮೇಯಿಸಲು ಕೂಡ ಸೂಕ್ತ ಸ್ಥಳವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ಅಮೃತ್ ಮಹಲ್ ಕಾವಲನ್ನು ಹಿಂಪಡೆದು ರೈತರು ಹಾಗೂ ಜನಜಾನುವಾರುಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಜ್ಜಂಪುರ ಪಶುವೈದ್ಯಾಧಿಕಾರಿ ಡಾ. ಗಜೇಂದ್ರ ಕುಮಾರ್, ಚಳ್ಳಕೆರೆ ಪಶುವೈದ್ಯಾಧಿಕಾರಿ ಶ್ರೀನಿವಾಸ ಬಾಬು, ನಾಯಕನಹಟ್ಟಿ ಪಶುವೈದ್ಯಾಧಿಕಾರಿ ವಿಜಯ್ ಕುಮಾರ್, ರೇಖಲಗೆರೆ ಎ.ಟಿ. ಅಶೋಕ, ಯುವ ಮುಖಂಡ ತಿಪ್ಪೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.