February 5, 2026
IMG-20260204-WA0216.jpg

ಹೊಳಲ್ಕೆರೆ: ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಗುರುಮೂರ್ತಿಯವರು ಹೇಳಿದರು.ತಾಲೂಕಿನ ಮಲ್ಲಾಡಿಹಳ್ಳಿ ಸೇವಾಶ್ರಮ ಆವರಣದಲ್ಲಿ ಬುಧವಾರ ಮೇರಾ ಯುವ ಭಾರತ್ ಹಾಗೂ ಮಡಿಲು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಕ್ರೀಡೆ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ಹಳ್ಳಿಯ ಯುವ ಪ್ರತಿಭೆಗಳು ಕೂಡ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಅವಕಾಶ ಹೆಚ್ಚುತ್ತಿದೆ ಹಾಗೂಕ್ರೀಡೆ ಎಂಬುದು ಕೇವಲ ಮನರಂಜನೆಗೆ ಮಾತ್ರ ಸೀಮಿತವಲ್ಲ. ಅದು ವ್ಯಕ್ತಿತ್ವ ನಿರ್ಮಾಣದ ಪ್ರಮುಖ ಸಾಧನವಾಗಿದೆ. ಶಿಸ್ತು, ಸಹನೆ, ನಾಯಕತ್ವ ಗುಣ ಹಾಗೂ ಆತ್ಮವಿಶ್ವಾಸವನ್ನು ಕ್ರೀಡೆ ಬೆಳೆಸುತ್ತದೆ. ಆದ್ದರಿಂದ ಯುವಕರು ತಮ್ಮ ಆಸಕ್ತಿಗೆ ತಕ್ಕ ಕ್ರೀಡೆಯಲ್ಲಿ ತೊಡಗಿಸಿಕೊಂಡು ನಿರಂತರ ಅಭ್ಯಾಸ ಮಾಡಿದರೆ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದರು.ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ಸಮಿತಿಯ ಸದಸ್ಯ ಜಯಣ್ಣ ಕೆಂಗುಂಟೆ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಯುವ ಸಮುದಾಯ ಹೆಚ್ಚಿನ ಸಮಯವನ್ನು ಮೊಬೈಲ್‌ಗಳಲ್ಲಿ ಕಳೆಯುತ್ತಿದ್ದಾರೆ. ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಕವನ್ನು ಕಳೆದುಕೊಳ್ಳುವ ಮಟ್ಟಿಗೆ ಮೊಬೈಲ್ ಬಳಕೆಗೆ ಅಂಟಿಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಯುವಕರನ್ನು ದುಷ್ಪ್ರಭಾವದ ದಾರಿಯತ್ತ ಕರೆದೊಯ್ಯುತ್ತಿದೆ. ಇದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಹಾನಿಗೊಳಗಾಗುತ್ತಿದೆ.
ಯುವಕರು ಹೊರಾಂಗಣ ಕ್ರೀಡೆಗಳಲ್ಲಿ ತೊಡಗಿಸಿ ಕೊಳ್ಳುವ ಮೂಲಕ ಈ ಸಮಸ್ಯೆಗಳಿಂದ ದೂರ ಉಳಿಯಬಹುದು ಎಂದರು.ಪೋಷಕರೂ ಕೂಡ ಮಕ್ಕಳ ಮೇಲಿನ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾಗಿದೆ. ಮಕ್ಕಳು ಏನು ಮಾಡುತ್ತಿದ್ದಾರೆ, ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಗಮನಿಸುವುದು ಅಗತ್ಯವಾಗಿದೆ. ಮನೆಯಲ್ಲೇ ಕ್ರೀಡೆಗೆ ಪ್ರೋತ್ಸಾಹ ನೀಡಿದರೆ ಮಕ್ಕಳು ಸಹಜವಾಗಿ ಆರೋಗ್ಯಕರ ಚಟುವಟಿಕೆಗಳತ್ತ ಮುಖ ಮಾಡುತ್ತಾರೆ ಎಂದು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಲು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕುಮಾರ ಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಇನ್ನಷ್ಟು ಕ್ರೀಡಾ ಕಾರ್ಯಕ್ರಮಗಳನ್ನು ನಮ್ಮ ಮಡಿಲು ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಮಡಿಲು ಸಂಸ್ಥೆಯ ಕಾರ್ಯದರ್ಶಿ ಆನಂದ್. ಡಿ ಮಾತನಾಡಿ ಯುವ ಸಮುದಾಯವು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕಿದೆ. ದೈಹಿಕ ಶ್ರಮದಿಂದ ದೇಹ ಸದೃಢವಾಗುವುದರ ಜೊತೆಗೆ ಮನಸ್ಸು ಕೂಡ ಶುದ್ಧವಾಗಿರುತ್ತದೆ. ಆರೋಗ್ಯವಂತ ಯುವ ಸಮುದಾಯವೇ ಬಲಿಷ್ಠ ರಾಷ್ಟ್ರದ ಅಡಿಪಾಯ ಎಂದು ಅಭಿಪ್ರಾಯಪಟ್ಟರು.ಕ್ರೀಡಾಕೂಟದಲ್ಲಿ ವಾಲಿಬಾಲ್, ಖೋಖೋ, ಓಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ಆಯೋಜಿಸಲಾಗಿದ್ದು, ತಾಲೂಕಿನ ವಿವಿಧ ಗ್ರಾಮಗಳಿಂದ ಯುವಕರು ಉತ್ಸಾಹದಿಂದ ಭಾಗವಹಿಸಿದರು, ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ಸಮಿತಿಯ ಸದಸ್ಯರಾದ ರಾಮದಾಸ್, ಬಂಡೇಕರ್ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಶಹವಜ್, ಸೇವಾಶ್ರಮ ವ್ಯವಸ್ಥಾಪಕ ಚಂದ್ರಪ್ಪ, ಶಿಕ್ಷಕರಾದ ಶಂಕರ್ ಮೂರ್ತಿ,ಸೋಮಶೇಖರ್, ಎಸ್.ಎಂ ಗೌಡ, ಮೋಹನ್ ಕುಮಾರ್, ಹರೀಶ್ ಸ್ವಾಮಿ ದೈಹಿಕ ಶಿಕ್ಷಕ ತಾರಾನಂದ, ಮಡಿಲು ಸಂಸ್ಥೆ ಖಜಾಂಚಿ ಪ್ರದೀಪ್, ನಿರ್ದೇಶಕರಾದ ಮಹಾಂತೇಶ್ ಇತರರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading