January 29, 2026
FB_IMG_1767533819269.jpg

ಹಿರಿಯೂರು ಜ.04:
ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಸಂಬಂಧಿಸಿದಂತೆ ಇದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಹತ್ತಿರದ ವೈ ಜಕ್ಷಂನ್‍ನಿಂದ ಚಿತ್ರದುರ್ಗ ತಾಲ್ಲೂಕಿನ ಗೋನೂರು ಅಕ್ವಡೆಕ್ಟ್ ವರೆಗೆ 114 ಕಿ.ಮೀ ಕಾಲುವೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಫೆಬ್ರವರಿ-2026ರ ಅಂತ್ಯಕ್ಕೆ ಪೂರ್ಣಗೊಂಡ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವುದಾಗಿ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.ಭಾನುವಾರ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿ, ತರುವಾಯ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚಿಕ್ಕಸಿದ್ದವ್ವನಹಳ್ಲಿ ಕಾಲುವೆ ಕಾಮಗಾರಿ, ಗೋನೂರು ಬಳಿಯ ಅಕ್ವಡೆಕ್ಟ್ ಕಾಲುವೆ ನಿರ್ಮಾಣ ಕಾಮಗಾರಿ ವೀಕ್ಷಣೆ ನಡೆಸಿದ ಸಚಿವ ಡಿ.ಸುಧಾಕರ್ ನಂತರ ನಗರದ ಭದ್ರಾ ಮೇಲ್ದಂಡೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ಅಜ್ಜಂಪುರ ತಾಲ್ಲೂಕಿನ ಅಬ್ಬಿನಹೊಳಲು ಗ್ರಾಮದ ಬಳಿಯ ವೈಜಂಕ್ಷನ್ ಕಾಮಗಾರಿ 4 ವರ್ಷಗಳಿಂದ ರೈತರ ಅಡೆತಡೆಯಿಂದಾಗಿ ಬಾಕಿ ಉಳಿದಿತ್ತು. ಕಳೆದ 2025ರ ಮಾರ್ಚ್‍ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಅಬ್ಬಿನಹೊಳಲಿಗೆ ತೆರಳಿ ರೈತರ ಮನ ಒಲಿಸಲಾಯಿತು. ಇದರಿಂದಾಗಿ ಕಾಮಗಾರಿ ಪೂರ್ಣಗೊಂಡಿದೆ. ಇದೇ ರೀತಿ ಹಿರಿಯೂರು ತಾಲ್ಲೂಕಿನಲ್ಲಿದ್ದ ಸಮಸ್ಯೆಯನ್ನು ಸಹ ಪರಿಹರಿಸಲಾಗಿದೆ. ಪ್ರಸಕ್ತ ಸರ್ಕಾರದ ಅವಧಿಯಲ್ಲಿಯೇ ಭದ್ರಾ ಮೇಲ್ದಂಡೆ ಯೋಜನೆಯನ್ನು ಸಂಪೂರ್ಣಗೊಳಿಸಲು ಗುರಿ ಹೊಂದಲಾಗಿದೆ. ಈ ಸಂಬಂಧ ಜಿಲ್ಲೆಯ ಎಲ್ಲಾ ಶಾಸಕರು ಪಕ್ಷಾತೀತವಾಗಿ ಮುಖ್ಯಮಂತ್ರಿಗಳಿಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಟ್ಟು, ಮುಂಬರುವ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡಲು ಕೋರಲಾಗುವುದು.ಇದರೊಂದಿಗೆ ಪ್ರಸ್ತುತ ಚಿತ್ರದುರ್ಗ ಶಾಖಾ ಕಾಲುವೆಯ ಕಾಮಗರಿಗೆ ಅಗತ್ಯವಿರುವ ರೂ. 300 ಕೋಟಿ ಹಣವನ್ನು ಮಾರ್ಚ್ ಅಂತ್ಯದ ಒಳಗಾಗಿ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವ ಸಂದರ್ಭದಲ್ಲಿ ಕಡೂರಿನ 22, ಹೊಸದುರ್ಗದ 32, ಹೊಳಲ್ಕೆರೆಯ 30, ಹಿರಿಯೂರಿನ 03 ಹಾಗೂ ಚಿತ್ರದುರ್ಗದ 03 ಸೇರಿ ಒಟ್ಟು 90 ಕೆರೆಗಳಿಗೆ ಅವುಗಳ ಸಾಮಥ್ರ್ಯದ ಶೇ.50 ರಷ್ಟು ನೀರನ್ನು ತುಂಬಿಸಲಾಗುವುದು. ಇದರಿಂದಾಗಿ ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ ಮತ್ತು ಚಳ್ಳಕೆರೆ ತಾಲ್ಲೂಕಿನ 73,946 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ದೊರಕಲಿದೆ. ಗೋನೂರು ಬಳಿಯ 1.94 ಕಿ.ಮೀ. ಉದ್ದದ ಅಕ್ವಾಡೆಕ್ಟ್ ಕಾಮಗಾರಿಯನ್ನು ಆಗಸ್ಟ್-2026ರ ಅಂತ್ಯಕ್ಕೆ ಪೂರ್ಣಗೊಳಿಸಿ ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಪಾವಗಡ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲಾಗುವುದು. ಸುಮಾರು 120 ಅಡಿ ಎತ್ತರ ಗೋನೂರು ಅಕ್ವಡೆಕ್ಟ್ ರಾಜ್ಯದಲ್ಲಿಯೇ ಅತ್ಯಂತ ಎತ್ತರದ ಅಕ್ವಡೆಕ್ಟ್ ಆಗಿದೆ ಎಂದು ಸಚಿವ ಡಿ.ಸುಧಾವಿಶ್ವೇಶ್ವರ ಜಲನಿಗಮ ಮಂಡಳಿಯಲ್ಲಿ ಜಿಲ್ಲೆಯ ಹೊಳಲ್ಕೆರೆ, ಚಿತ್ರದುರ್ಗ, ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ ಹನಿ ನೀರಾವರಿ ಹಾಗೂ ಕೆರೆ ತುಂಬುವ ಕಾಮಗಾರಿಗಳಿಗೆ ರೂ.2,600 ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಲಾಗಿದೆ. ಟೆಂಡರ್ ಕರೆಯಲಾಗಿದ್ದು, ಕಾಮಗಾರಿ ಆರಂಭಿಸಲಾಗುವುದು. ಇದರಿಂದ 73,946 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 2022-23ರಲ್ಲಿ ಘೋಷಿಸಿದ ರೂ.5,300 ಕೋಟಿಯನ್ನು ಬಿಡುಗಡೆ ಮಾಡಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಜನರ ಸಂಖ್ಯೆ ಹೆಚ್ಚಿದೆ. ಕೇಂದ್ರ ಸರ್ಕಾರದ ನೆರವಿನಿಂದ ಇವರೆಲ್ಲರಿಗೂ ಒಳಿತಾಗುವುದು. ಈ ಕುರಿತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಗೋವಿಂದ. ಎಂ ಕಾರಜೋಳ ಅವರು ಸಹ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡದೇ ಕೂಡಲೇ ಬಜೆಟ್‍ನಲ್ಲಿ ಘೋಷಿಸಿದ ಹಣ ಬಿಡುಗಡೆ ಮಾಡಬೇಕು ಎಂದು ಸಚಿವ ಡಿ.ಸುಧಾಕರ್ ಒತ್ತಾಯಿಸಿದರು.ಭದ್ರಾ ಮೇಲ್ದಂಡೆ ಯೋಜನೆಗಾಗಿ ರಾಜ್ಯ ಸರ್ಕಾರ 2024-25ನೇ ಸಾಲಿನ ಆಯವ್ಯಯದಲ್ಲಿ ರೂ.1,250 ಕೋಟಿ ಅನುದಾನವನ್ನು ಹಂಚಿಕೆ ಮಾಡಿತ್ತು. ಇದರಲ್ಲಿ ಕೇಂದ್ರ ಸರ್ಕಾರದ ಅನುದಾನವನ್ನು ನಿರೀಕ್ಷಿಸಲಾಗಿತ್ತು. ಆದರೆ ಕೇಂದ್ರದಿಂದ ಯಾವುದೇ ಅನುದಾನ ಬರಲಿಲ್ಲ. ಆದರೆ ರಾಜ್ಯ ಸರ್ಕಾರವೇ ರೂ.1,443 ಕೋಟಿಯನ್ನು ಬಿಡುಗಡೆ ಮಾಡಿತ್ತು. ಇದು ಅಯವ್ಯಯದಲ್ಲಿ ಹಂಚಿಕೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಅನುದಾನವಾಗಿದೆ. ಇನ್ನು 2025-26ನೇ ಸಾಲಿನಲ್ಲಿ ರೂ.1,440.29 ಕೋಟಿಗಳ ಅನುದಾನ ಹಂಚಿಕೆ ಮಾಡಿದ್ದು, ಇದುವರೆಗೂ ರೂ.520 ಕೋಟಿ ಬಿಡುಗಡೆ ಮಾಡಿದೆ. ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನೂ 3 ತಿಂಗಳು ಬಾಕಿ ಇದ್ದು, ಉಳಿದ ಹಣವನ್ನು ಸಹ ಸರ್ಕಾರ ಬಿಡುಗಡೆ ಮಾಡಲಿದೆ. ಒಟ್ಟಾರೆಯಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ನವೆಂಬರ್-2025ರ ಅಂತ್ಯವರೆಗೆ ಒಟ್ಟಾರೆ ರೂ.11,290 ಕೋಟಿ ಖರ್ಚು ಮಾಡಲಾಗಿದೆ. ಯೋಜನೆ ಪೂರ್ಣಗೊಳ್ಳಲು ಇನ್ನೂ ರೂ.10,000 ಕೋಟಿ ಅಗತ್ಯವಿದೆ. ಮುಂಬರುವ ವರ್ಷಗಳ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಸಚಿವ ಡಿ.ಸುಧಾಕರ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರುಗಳಾದ ಎನ್.ವೈ. ಗೋಪಾಲಕೃಷ್ಣ, ಡಾ.ಎಂ. ಚಂದ್ರಪ್ಪ, ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ, ಮುಖ್ಯ ಇಂಜಿನಿಯರ್ ಎಫ್.ಹೆಚ್. ಲಮಾಣಿ, ಅಧೀಕ್ಷಕ ಇಂಜಿನಿಯರ್ ಹರೀಶ್ ಕೆ.ಟಿ., ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ ಬಾರಿಕರ ಸೇರಿದಂತೆ ರೈತ ಮುಖಂಡರು ಇದ್ದರು.==============

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading