January 29, 2026
IMG-20260104-WA0095.jpg

ಚಿತ್ರದುರ್ಗ:
“ಧರ್ಮಗ್ರಂಥಗಳು ಆಲೋಚನೆಯನ್ನು ನಾಶ ಮಾಡಿದರೆ, ಪುಸ್ತಕಗಳು ಹೊಸ ಆಲೋಚನೆಗಳನ್ನು ಬೆಳೆಸುತ್ತವೆ” ಎಂಬ ಸಾವಿತ್ರಿಬಾ ಪುಲೆ ಅವರ ಚಿಂತನೆಯೊಂದಿಗೆ ಬುದ್ಧನಗರ ಮಾರ್ಗದಲ್ಲಿನ ಸಾವಿತ್ರಿಬಾ ಪುಲೆ ಸರ್ಕಲ್ ಬೋರ್ಡ್‌ಗೆ ಅಂಬೇಡ್ಕರ್ ವಿಚಾರ ವೇದಿಕೆಯ ಸದಸ್ಯರು ಹೂವಿನ ಹಾರ ಹಾಕುವ ಮೂಲಕ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಗರದ ಮಹಾತ್ಮ ಜ್ಯೋತಿಬಾ ಪುಲೆ ಸ್ಪರ್ಧಾತ್ಮಕ ಕೇಂದ್ರದಲ್ಲಿ ಜಂಬೂದ್ವೀಪ ಕರ್ನಾಟಕ ಹಾಗೂ ಅಂಬೇಡ್ಕರ್ ವಿಚಾರ ವೇದಿಕೆ, ಚಿತ್ರದುರ್ಗ ಇವರ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸಕ ವೇದಾಂತ ಏಳಂಜಿ ಮಾತನಾಡಿ, ಸಾವಿತ್ರಿಬಾ ಪುಲೆ ಮತ್ತು ಜ್ಯೋತಿಬಾ ಪುಲೆ ದಂಪತಿಗಳನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಕುಟುಂಬ ಹಾಗೂ ಮೇಲ್ವರ್ಗಗಳ ತೀವ್ರ ವಿರೋಧದ ನಡುವೆಯೂ ಸಾವಿತ್ರಿಬಾ ಪುಲೆ ದೇಶದ ಪ್ರಥಮ ಶಿಕ್ಷಕಿಯಾಗಿ ಹೊರಹೊಮ್ಮಿದರು ಎಂದು ಹೇಳಿದರು.
ಅಸ್ಪೃಶ್ಯರು ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ತೆರೆದು, ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ವಿದ್ಯಾರ್ಥಿ ಭತ್ಯೆ, ಬಟ್ಟೆಗಳನ್ನು ಒದಗಿಸಿದರು. ಮನೆಮನೆಗಳಿಗೆ ತೆರಳಿ ಶಿಕ್ಷಣದ ಮಹತ್ವ ತಿಳಿಸಿದರು. ಅಂತರಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಿ, ಪುರೋಹಿತರಿಲ್ಲದ ಸರಳ ವಿವಾಹ ಪದ್ಧತಿಯನ್ನು ಜಾರಿಗೆ ತಂದರು. ಮಹಿಳಾ ಸಮಾನತೆ, ಮೌಢ್ಯ ನಿರ್ಮೂಲನೆ ಹಾಗೂ ವಿಧವಾ ಪುನರ್ವಿವಾಹಕ್ಕೆ ಸತ್ಯಶೋಧಕ ಸಮಾಜದ ಮೂಲಕ ಶ್ರಮಿಸಿದರು. ಬರಗಾಲದ ಸಂದರ್ಭದಲ್ಲೂ ದೀನದಲಿತರ ಪರವಾಗಿ ನಿಂತು ಸೇವೆ ಸಲ್ಲಿಸಿ ಜೀವತೆತ್ತರು ಎಂದು ಹೇಳಿದರು.
ಶಿಕ್ಷಕ ಪ್ರದೀಪ್ ಮಾತನಾಡಿ, ಶಾಲೆ ಕಟ್ಟಿಸಿ ಪುಸ್ತಕ ನೀಡಿದವರು ಪುಲೆ ದಂಪತಿಗಳು. ಶೂದ್ರಾತಿಶೂದ್ರರಿಗೆ ಯೋಚಿಸುವ ಶಕ್ತಿಯನ್ನು ನೀಡಿದ ಮಹಾನ್ ಚಿಂತಕರು. ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸ್ಫೂರ್ತಿಯಾದರು ಎಂದರು.
ಕವಿ ಶಿವಶಂಕರ ಸೀಗೆಹಟ್ಟಿಯವರು “ಸಾವಿತ್ರಮ್ಮ ಸಾವಿತ್ರಮ್ಮ ಸಾಟಿಯುಂಟೆ ಅಕ್ಷರದಮ್ಮ” ಎಂಬ ಸ್ವರಚಿತ ಪದ್ಯವನ್ನು ಹಾಡಿದರು. ಜ್ಯೋತಿಬಾ ಪುಲೆ ಅವರನ್ನು ಕೊಲ್ಲಲು ಬಂದವರನ್ನೇ ಮನಃಪರಿವರ್ತನೆ ಮಾಡಿದ ಅಪರೂಪದ ಮಹಾನ್ ಗುರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಂಬೂದ್ವೀಪ ರಾಮಣ್ಣ ಮಾತನಾಡಿ, ಅನಕ್ಷಸ್ಥೆಯಾಗಿದ್ದ ಸಾವಿತ್ರಿಬಾ ಪುಲೆ ಅಕ್ಷರಸ್ಥೆಯಾಗಿ ದೇಶದ ಪ್ರಥಮ ಶಿಕ್ಷಕಿಯಾಗಿ ಇಡೀ ದೇಶಕ್ಕೆ ಮಾದರಿಯಾದರು. ಸದಾ ಪುಸ್ತಕ ಓದುವ ಅಭ್ಯಾಸ ಜೀವನವನ್ನು ರೂಪಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಾವಿತ್ರಿಬಾ ಪುಲೆ ಸರ್ಕಲ್ ಸ್ಥಾಪಕ ಚಕ್ರವರ್ತಿ, ಶ್ರೀನಿವಾಸರಾಜು, ವಿಶ್ವಾನಂದ (ವಿಕೆವಿ), ಶಿಕ್ಷಕ ಸಿದ್ದೇಶ್ ಕೆ., ಪ್ರಾಧ್ಯಾಪಕರು ಮಂಜುನಾಥ ಆರ್., ಕುಮಾರ್ ಹೆಚ್., ಶಿಕ್ಷಕ ಯಾದಲಗಟ್ಟೆ ಪ್ರಕಾಶ್, ವಾರ್ಡನ್ ರುದ್ರಮುನಿ, ಸಮಯ ಏಳಂಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading