ಚಿತ್ರದುರ್ಗ ಡಿ.03:
ವಿಕಲಚೇತನರೆಂದು ನಿರ್ಲಕ್ಷ ತೋರದೇ, ವಿಕಲಚೇತನರಿಗೆ ಗೌರವ ಹಾಗೂ ಸಮಾನ ಅವಕಾಶ ಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ. ತಾಜ್‍ಪೀರ್ ಹೇಳಿದರು.
ನಗರದ ಮದಕರಿ ವೃತ್ತ ಬಳಿಯ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘ ಜಿಲ್ಲಾ ಘಟಕ, ಗ್ರಾಮೀಣ, ನಗರ, ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಒಕ್ಕೂಟ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ವಿಕಲಚೇತನರ ದಿನಾಚರಣೆ” ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬದ ಸದಸ್ಯರು, ಶಿಕ್ಷಕರು, ಸರ್ಕಾರದ ವಿವಿಧ ಇಲಾಖೆಗಳು, ಖಾಸಗಿಯವರು ವಿಕಲಚೇತನರನ್ನು ನಿರ್ಲಕ್ಷ ಮಾಡಬಾರದು. ವಿಕಲಚೇತನರಿಗೆ ಅನುಕಂಪಕ್ಕಿಂತ ಗೌರವ ಹಾಗೂ ಅವರಿಗೆ ತಕ್ಕಂತೆ ಸಮಾನ ಅವಕಾಶ ನೀಡಬೇಕು ಎಂದು ಹೇಳಿದರು.
ವಿಕಲಚೇತನರಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೆ ಇರುತ್ತದೆ. ಅದರಲ್ಲೂ ಸಾಮಾನ್ಯ ಜನರಿಗಿಂತಲೂ ಉತ್ತಮ ಪ್ರತಿಭೆ ವಿಕಲಚೇತನರಲ್ಲಿರುತ್ತದೆ. ಶಿಕ್ಷಣ, ಕ್ರೀಡಾ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸಹ ವಿಕಲಚೇತನರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳು ವಿಕಲಚೇತನರಿಗೆ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸಲು ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ವಿಕಲಚೇತನರು ಎಲ್ಲರಂತೆ ಸಮಾಜದ ಮುಖ್ಯವಾಹಿನಿಗೆ ಬರಲು ಸಮಾಜದ ಜನರು ಪ್ರೀತಿ ತೋರಿಸಬೇಕು. ಶ್ಯೂರಿಟಿ ಇಲ್ಲದೇ ಬ್ಯಾಂಕುಗಳು ಸಾಲ-ಸೌಲಭ್ಯ ನೀಡಿ ಪ್ರೋತ್ಸಾಹ ನೀಡಿದರೆ ಖಂಡಿತವಾಗಿಯೂ ವಿಕಲಚೇತನರು ಸಾಲ ಮರುಪಾವತಿ ಮಾಡಿ, ದೇಶದ ಅಭಿವೃದ್ಧಿಗೆ ಹಾಗೂ ಉದ್ಯೋಗ ಸೃಷ್ಠಿಗೂ ನೆರವಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್. ಶಿವಣ್ಣ ಮಾತನಾಡಿ, ವಿಕಲಚೇತನರು ಬದುಕು ಕಟ್ಟಿಕೊಳ್ಳಲು ಸರ್ಕಾರದ ಸಹಾಯಹಸ್ತ ಬೇಕು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಕಲಚೇತನರ ಅಭ್ಯುದಯಕ್ಕಾಗಿ ಸಾಕಷ್ಟು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನ ಮಾಡುತ್ತಿದೆ. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಸ್ವ-ಸಾಮಥ್ರ್ಯದಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ವಿಕಲಚೇತನರಿಗೆ ಅನುಕಂಪ ತೋರಿಸದೇ ಸಮಾಜಮುಖಿಯಾಗಿ ಜೀವನ ನಡೆಸಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಲು, ವಿಕಲಚೇತನರು ಕೀಳರಿಮೆಯ ಮನಸ್ಥಿತಿಯಿಂದ ಹೊರಬರುವಂತೆ ಮಾಡಲು ಅಂಗವಿಕಲರ ಕಲ್ಯಾಣ ಇಲಾಖೆಯು ಶ್ರಮಿಸುತ್ತಿದೆ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ ಮಾತನಾಡಿ, ವಿಕಲಚೇತನರನ್ನು ಗೌರವಯುತವಾಗಿ ಕಾಣಬೇಕು. ವಿಕಲಚೇತನರ ಸಬಲೀಕರಣಕ್ಕಾಗಿ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಸ್ಥಳೀಯ ಸಂಸ್ಥೆಗಳು ಸಹ ಶೇ.5 ಅನುದಾನ ಮೀಸಲಿಟ್ಟು ವಿಕಲಚೇತನರ ಸಮಾಜದ ಮುಖ್ಯವಾಹಿನಿಗೆ ತರಲು ಕ್ರಮವಹಿಸಿದ್ದು, ವಿಕಲಚೇತನರು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, 2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 35,971 ಜನ ವಿಕಲಚೇತನರು ಇದ್ದು, ವಿಕಲಚೇತನರು ಮುಖ್ಯವಾಹಿನಿಯಲ್ಲಿ ಸಾಮಾನ್ಯರಂತೆ ಜೀವಿಸಲು ಅನುಕೂಲವಾಗುವಂತೆ ಎಲ್ಲ ರೀತಿಯ ಅಡೆತಡೆರಹಿತವಾಗಿ ಸೌಲಭ್ಯ ಅಥವಾ ನೆರವು ನೀಡಲು ಸರ್ಕಾರ ಹಾಗೂ ಸಮುದಾಯದ ಜವಾಬ್ದಾರಿಯಾಗಿದೆ ಎಂದರು.
ವಿಕಲಚೇತನರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಎಲ್ಲ ವಿಕಲಚೇತನರು ಮುಖ್ಯ ವಾಹಿನಿಗೆ ಬರುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಪ್ರಕಾರ 21 ವಿಧದ ಅಂಗವಿಕಲತೆಯನ್ನು ಗುರುತಿಸಲಾಗಿದೆ. ಕರ್ನಾಟಕ ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ನಿಯಮಗಳು 2019 ಅನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ 2024-25ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಯ ತಾಲ್ಲೂಕುವಾರು ಅತೀ ಹೆಚ್ಚು ಅಂಕಗಳನ್ನು ಪಡೆದಿರುವ ವಿಕಲಚೇತನ ವಿದ್ಯಾರ್ಥಿಗಳಾದ ಹೊಳಲ್ಕೆರೆ ಧನಂಜಯ, ಹೊಸದುರ್ಗ ಕೆ.ಹೆಚ್.ಭರತ್, ಮೊಳಕಾಲ್ಮುರು ಬಿ.ಪ್ರೇಮಕುಮಾರ, ಚಿತ್ರದುರ್ಗ ಜಿ.ಎಂ.ಚೇತನ, ಚಳ್ಳಕೆರೆ ಎ.ಮಾನಸ ಹಾಗೂ ಹಿರಿಯೂರಿನ ಸಿ.ಸಂಗೀತ ಅವರನ್ನು ಗೌರವಿಸಲಾಯಿತು. ಸ್ವಯಂ ಉದ್ಯೋಗ ಮಾಡುತ್ತಿರುವ ಚಿತ್ರದುರ್ಗ ತಾಲ್ಲೂಕಿನ ಮಾನಂಗಿ ಗ್ರಾಮದ ವಿಕಲಚೇತನ ಬಿ.ಕುಮಾರಸ್ವಾಮಿ ಹಾಗೂ ಕಲಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಚಿತ್ರದುರ್ಗದ ನೆಹರು ನಗರದ ಆರ್.ಶ್ರೀಚಿತ್ರಾ ಹಾಗೂ ವಿಕಲಚೇತನರ ಸಾಧನೆಗೆ ಸ್ಪೂರ್ತಿ ನೀಡಿದ ಲಾಸಿಕಾ ಪೌಂಡೇಷನ್‍ನ ಕಾರ್ಯದರ್ಶಿ ಮಂಜುನಾಥ್ ಅವರಿಗೆ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ.ಕೆ.ದಿನಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಹೆಚ್.ವಿಜಯ ಕುಮಾರ್, ನಿರೂಪಣಾಧಿಕಾರಿ ಮಂಜುನಾಥ ಸೇರಿದಂತೆ ವಿಕಲಚೇತನರು ಇದ್ದರು.
==========
About The Author
Discover more from JANADHWANI NEWS
Subscribe to get the latest posts sent to your email.