ಚಿತ್ರದುರ್ಗ ನ.03:
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಸ್ಥಾಪನೆಗೊಂಡು 50 ವರ್ಷಗಳಾದ ಹಿನ್ನಲೆಯಲ್ಲಿ ಮಂಡಳಿಯ ಸುವರ್ಣ ಮಹೋತ್ಸವನ್ನು ಇದೇ ನವೆಂಬರ್ 05 ರಂದು ಮಧ್ಯಾಹ್ನ 2.30 ಗಂಟೆಗೆ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳು ಜಂಟಿಯಾಗಿ ಚಿತ್ರದುರ್ಗ ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ (ಮುರುಘರಾಜೇಂದ್ರ ಕ್ರೀಡಾಂಗಣ) ಯಾವುದೇ ಲೋಪವಿಲ್ಲದಂತೆ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಗೊಂಡು 50 ವರ್ಷಗಳಾದ ಹಿನ್ನಲೆಯಲ್ಲಿ ಸುವರ್ಣ ಮಹೋತ್ಸವ ಆಚರಿಸುವ ಸಂಬಂಧಪಟ್ಟಂತೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಅವರು ಸೇರಿದಂತೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಎನ್‍ಸಿಸಿ, ಎನ್‍ಎಸ್‍ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಸ್ವ-ಸಹಾಯ ಸಂಘಗಳ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಅಧಿಕಾರಿಗಳ ತಂಡ ಹಾಗೂ ಸ್ವಯಂ ಸೇವಕರು, ಸಂಬಂಧಪಟ್ಟವರು ಹೆಚ್ಚಿನ ಕಾಳಜಿ ವಹಿಸಿ ಆಹಾರ, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಆಡಳಿತ ಹಾಗೂ ವಿಧಾನಸಭಾ ಸದಸ್ಯರು, ಸ್ಥಳೀಯ ಪರಿಸರವಾದಿಗಳು, ಕೈಗಾರಿಕಾ ಉದ್ಯಮಿಗಳು ಅವರನ್ನು ಒಳಗೊಂಂಡಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳುವುದು ಹಾಗೂ ಜನ ಸಾಮಾನ್ಯರನ್ನು ತಲುಪಿಸುವ ರೀತಿಯಲ್ಲಿ ಪರಿಸರ ಮಾಲಿನ್ಯ ಸಮಸ್ಯೆಗಳಾದ ಘನ ತ್ಯಾಜ್ಯ, ಜಲ ಮಾಲಿನ್ಯ, ಇ-ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಲು ಸೂಚಿಸಲಾಗಿದ್ದು, ಈ ಕುರಿತು ಉಪವಿಭಾಗಾಧಿಕಾರಿಗಳು ಮೇಲ್ವಿಚಾರಣೆ ಮಾಡುವಂತೆ ತಿಳಿಸಿದರು.
ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಮೈದಾನವನ್ನು ಸ್ವಚ್ಛಗೊಳಿಸಲು ಹಾಗೂ ಆಗಮಿಸುವ ಗಣ್ಯ ವ್ಯಕ್ತಿಗಳು ಮತ್ತು ಸಾರ್ವಜನಿಕರು ಸಂಚಾರ ಮಾಡುವ ರಸ್ತೆಗಳ ಸ್ವಚ್ಛತೆ ಕಾರ್ಯಕೈಗೊಳ್ಳಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್‍ಗೆ ಸೂಚಿಸಿದರು.
ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆಗಾಗಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ, ಸಂಸ್ಥೆಗಳನ್ನು ಗುರುತಿಸಿ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಯ ತಲಾ ಮೂರು ಗಣ್ಯರಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ನೀಡಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ವಿದ್ಯುತ್ ವ್ಯವಸ್ಥೆ ಮಾಡಲು ಹಾಗೂ ಜನರೇಟರ್ ವ್ಯವಸ್ಥೆ ಮಾಡಬೇಕು ಹಾಗೂ ಪ್ರಥಮ ಚಿಕಿತ್ಸೆಯ ಔಷಧಿ ಉಪಕರಣಗಳು ವ್ಯವಸ್ಥೆ ಮಾಡಲು ಮತ್ತು ತುರ್ತು ಚಿಕಿತ್ಸಾ ವಾಹನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ರೇಷ್ಮಾ ಹಾನಗಲ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಲಯ ಹಿರಿಯ ಪರಿಸರ ಅಧಿಕಾರಿ ರಮೇಶ್ ನಾಯಕ್, ಚಿತ್ರದುರ್ಗ ಪರಿಸರ ಅಧಿಕಾರಿ ಆಸಿಫ್ ಖಾನ್, ಸಹಾಯಕ ಪರಿಸರ ಅಧಿಕಾರಿ ರಾಜೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
===========
About The Author
Discover more from JANADHWANI NEWS
Subscribe to get the latest posts sent to your email.