September 14, 2025


ಹಿರಿಯೂರು:
ಹನಿನೀರಾವರಿ ಕಾಮಗಾರಿ ಎಂದು ಹೇಳಿಕೊಂಡು ಕೆಲವು ಕಂಪನಿಗಳು ಜೆ.ಜೆ.ಹಳ್ಳಿ ಹೋಬಳಿ, ಕಾಟನಾಯಕನಹಳ್ಳಿ, ಆನೆಸಿದ್ರಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಕಾಮಗಾರಿ ಮಾಡುತ್ತಿದ್ದು, ಕೂಡಲೇ ಕಾಮಗಾರಿ ಸ್ಥಗಿತ ಮಾಡಿ, ಮೊದಲು ವಾಣಿವಿಲಾಸ ಸಾಗರಕ್ಕೆ ನೀರು ಭರ್ತಿ ಮಾಡುವಂತ ಕಾಮಗಾರಿಗಳ ಪೂರ್ಣಗೊಳಿಸಬೇಕು ಎಂಬುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹನಿನೀರಾವರಿ ಕಾಮಗಾರಿಯನ್ನು ಸ್ಥಗಿತಗೊಳಿಸಿ, ವಾಣಿವಿಲಾಸ ಸಾಗರಕ್ಕೆ ನೀರು ಭರ್ತಿ ಮಾಡುವಂತ ಕಾಮಗಾರಿಗಳನ್ನು ಮೊದಲು ಪೂರ್ಣಗೊಳಿಸಲು ಒತ್ತಾಯಿಸಿ, ನಡೆಸಲಾದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಜ್ಜಂಪುರ ಸಮೀಪದ ವೈ ಜಂಕ್ಷನ್ ನಿಂದ ತುಮಕೂರು ಮುಖ್ಯ ಕಾಲುವೆ ಮೂಲಕ ನೀರು ಹರಿಸಲಾಗುತ್ತದೆ. ಮಳೆಗಾಲದ ಜುಲೈ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ನೀರು ಹರಿಸಲಾಗುತ್ತದೆ ಎಂಬುದಾಗಿ ಅಧಿಕಾರಿಗಳು ತಿಳಿಸಿರುತ್ತಾರೆ. ಆದರೆ ವೈ ಜಂಕ್ಷನ್ ನಿಂದ ಹಿರಿಯೂರು ತಾಲ್ಲೂಕಿಗೆ ಸುಮಾರು 200 ಕಿ.ಮೀ.ಆಗುತ್ತದೆ.ಇನ್ನು ಆ ಜಾಗದಲ್ಲಿ ರೈತರ ಜಮೀನು ಭೂಸ್ವಾಧೀನ ಆಗಿಲ್ಲ. ಇನ್ನು ಈ ಕಾಮಗಾರಿ ಮುಗಿಯುವ ಹೊತ್ತಿಗೆ ಸುಮಾರು 10 ವರ್ಷಗಳು ಬೇಕಾಗುತ್ತವೆ.
ಅಷ್ಟು ಹೊತ್ತಿಗೆ ಎಲ್ಲಾ ಪೈಪುಗಳು ಹಾಳಾಗಿ ಹೋಗುತ್ತವೆ.ಇದರ ಬದಲಿಗೆ ವಾಣಿವಿಲಾಸ ಜಲಾಶಯ ಭರ್ತಿ ಮಾಡಿ ಬೇಸಿಗೆ ಕಾಲದಲ್ಲಿ ಇಡೀ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಬಹುದಾಗಿದೆ. ಹನಿನೀರಾವರಿ ಪದ್ದತಿಯ ಇಡೀ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕೂಡಲೇ ಈ ಕಾಮಗಾರಿ ನಿಲ್ಲಿಸಿ ಎಂಬುದಾಗಿ ಜಿಲ್ಲಾಧಿಕಾರಿಗಳಿಗೆ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಲಾಗಿದ್ದು ಇದನ್ನು ಪರಿಗಣಿಸದೆ ಕಾಮಗಾರಿ ಮುಂದುವರೆಸಲಾಗುತ್ತಿದೆ ಎಂಬುದಾಗಿ ಹೇಳಿದರು.
ರೈತಮುಖಂಡರಾದ ಆಲೂರು ಸಿದ್ಧರಾಮಣ್ಣ ಮಾತನಾಡಿ, ಹನಿನೀರಾವರಿ ಕಾಮಗಾರಿಯಲ್ಲಿ ಹೆಚ್ಚಿನ ಕಮೀಷನ್ ಬರುತ್ತಿರುವುದರಿಂದ ಭದ್ರಾ ಮೇಲ್ದಂಡೆ ಅನುಷ್ಟಾನಾಧಿಕಾರಿಗಳು ಹನಿ ನೀರಾವರಿ ಯೋಜನೆ ಕಾಮಗಾರಿಗಳಿಗೆ ಒತ್ತು ನೀಡುತ್ತಿರುವುದು ಎಷ್ಟು ಸರಿ ಎಂಬುದನ್ನು ರೈತರು ಪ್ರಶ್ನಿಸಿದ್ದಾರೆ. ಮೊದಲ ಹಂತದ ಪ್ಯಾಕೇಜ್ -1ರ ತುಂಗಾ ನದಿಯಿಂದ ಭೌದ್ರಾ ನದಿಗೆ ನೀರು ಪಂಪ್ ಮಾಡುವ ಕಾಮಗಾರಿ ಮುಗಿದಿಲ್ಲ.
ಇದಲ್ಲದೆ ಪ್ಯಾಕೇಜ್ 1ರಲ್ಲೇ ಸಾಕಷ್ಟು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಪರಿಸ್ಥಿತಿ ಈ ರೀತಿ ಇದ್ದು ಅನೇಕ ಕಡೆ ಕಾಮಗಾರಿ ಮುಗಿಯದೇ ಇದ್ದರೂ ಸಹ ಜವನಗೊಂಡನಹಳ್ಳಿ ಹೋಬಳಿಯ ಕೆಲ ಗ್ರಾಮಗಳಲ್ಲಿ ಹನಿನೀರಾವರಿ ಸೌಲಭ್ಯ ಅಳವಡಿಸುವ ಪೈಪ್ ಲೈನ್ ಕಾಮಗಾರಿ ಮಾಡಿ ದುಡ್ಡು ಹೊಡೆಯುವ ಕಾರ್ಯ ಮಾಡಲಾಗುತ್ತಿದೆ. ಇಡೀ ಹನಿ ನೀರಾವರಿ ಸ್ಕೀಮ್ ದುಡ್ಡುಕೊಳ್ಳೆ ಹೊಡೆಯುವುದಾಗಿರುತ್ತದೆ ಎಂಬುದಾಗಿ ಅವರು ಆರೋಪಿಸಿದ್ದಾರೆ.
ಮಳೆಗಾಲದಲ್ಲಿ ಹನಿ ನೀರಾವರಿ ಮೂಲಕ ರೈತರಿಗೆ ನೀರು ಹರಿಸುವ ಬದಲು 130 ಅಡಿ ನೀರು ತುಂಬುವ ಸಾಮರ್ಥ್ಯ ಇರುವ ವಾಣಿವಿಲಾಸ ಜಲಾಶಯಕ್ಕೆ ನೀರು ಭರ್ತಿ ಮಾಡಿ ಬೇಸಿಗೆಯ ಕಾಲದಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸುವ ಜೊತೆಗೆ ಹನಿ ನೀರಾವರಿ ಮೂಲಕ ಹಲವು ಭಾಗಗಳಿಗೆ ನೀರು ಕೊಡಬಹುದಾಗಿದೆ. ಈ ಕೆಲಸ ಮಾಡುವ ಬದಲು ಅವೈಜ್ಞಾನಿಕವಾದ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂಬುದಾಗಿ ರೈತರು ಆಪಾದಿಸಿದ್ದಾರೆ.
ಹಿರಿಯೂರು ಕಲ್ಲವಳ್ಳಿ ಭಾಗದ ಮುಗ್ದ ರೈತರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ರೈತರಿಗೆ ಯಾವುದೇ ನೋಟೀಸ್ ನೀಡದೆ ರೈತರ ಗಮನಕ್ಕೆ ತರದೆ ಕಂದಾಯ ನಿಯಮಗಳನ್ನು ಪಾಲಿಸದೆ, ಗಿಡ-ಮರ ಬೆಳೆ ಮತ್ತು ಭೂಮಿಯನ್ನು ಹಾನಿ ಮಾಡಿ ಕಾಮಗಾರಿ ಮಾಡಲಾಗುತ್ತಿದೆ. ರೈತರು ಕಾಮಗಾರಿ ಮಾಡದಂತೆ ತಡೆದರೆ ಅವರ ಮೇಲೆ ಗುತ್ತಿಗೆದಾರರ ದೌರ್ಜನ್ಯ ಮಾಡಿ ಹೊಡೆಯಲು ಮುಂದಾಗಿರುತ್ತಾರೆ.
ಈ ಕೂಡಲೇ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕು. ಕಂಪನಿಗಳ ವಿರುದ್ಧ ನಿಯಾಮಾನುಸಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪರವಾಗಿ ಅವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ರೈತ ಮುಖಂಡರಾದ ಕುಮಾರ್, ಶಿವಣ್ಣ, ನಿಂಗಪ್ಪ, ರಾಮಣ್ಣ, ಈರಣ್ಣ, ಆಲೂರು ಸಿದ್ಧರಾಮಣ್ಣ, ರಂಗಸ್ವಾಮಿ ಸೇರಿದಂತೆ ಅನೇಕರು ರೈತಮುಖಂಡರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading