ಚಿತ್ರದುರ್ಗ ಸೆ.03:
ಸಮಾಜ ಕಲ್ಯಾಣ ಇಲಾಖೆಯಡಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ಹಾಗೂ ಮೆಟ್ರಿಕ್ ನಂತರದ ಎಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಸುರಕ್ಷಾ ಕ್ರಮಗಳ ಬಗ್ಗೆ ಜಿ.ಪಂ. ಸಿಇಓ ಸುತ್ತೋಲೆ ಹೊರಡಿಸಿದ್ದಾರೆ.
ನಿಲಯ ಮೇಲ್ವಿಚಾರಕರು ವಿದ್ಯಾರ್ಥಿನಿಲಯಗಳಲ್ಲಿ ಅಳವಡಿಸಿರುವ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಸಿ.ಸಿ.ಟಿವಿ ಕ್ಯಾಮಾರ ಕೆಟ್ಟು ಹೋದ ಸಂದರ್ಭದಲ್ಲಿ ತಕ್ಷಣವೇ ದುರಸ್ತಿ ಮಾಡಿಸಿ ಚಾಲ್ತಿಯಲ್ಲಿರುವಂತೆ ನೋಡಿ ಕೊಳ್ಳಬೇಕು. ಪ್ರತಿ ತಿಂಗಳು ಸಿ.ಸಿ.ಟಿವಿ ವೀಡಿಯೋ ದೃಶ್ಯಗಳನ್ನು ಸಿ.ಡಿ. ಅಥವಾ ಪೆನ್‍ಡ್ರೈವ್‍ನಲ್ಲಿ ಸಂಗ್ರಹಿಸಿಡಬೇಕು.
ವಿದ್ಯಾರ್ಥಿನಿಲಯದ ದ್ವಾರದಲ್ಲಿ ಸಿಬ್ಬಂದಿ ಹಾಗೂ ರಿಜಿಸ್ಟರ್ ಇರಿಸಿ, ವಿದ್ಯಾರ್ಥಿಗಳು ಹೊರಗೆ ತೆರಳುವ ಹಾಗೂ ಒಳಗೆ ಬರುವ ಮುನ್ನ ಹೆಸರು, ಹೊಗುವ ಸಮಯ, ಸ್ಥಳ ಮತ್ತು ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು. ವಿದ್ಯಾರ್ಥಿಗಳು ರಜೆ ಕೋರಿದ್ದಲ್ಲಿ ಪೋಷಕರಿಗೆ ಅಥವಾ ಪತ್ರದ ಮೂಲಕ ಖಾತರಿಪಡಿಸಿಕೊಂಡ ನಂತರವೇ ವಿದ್ಯಾರ್ಥಿಗಳಿಂದ ರಜೆ ಅರ್ಜಿ ಪಡೆದು ಮಂಜೂರು ಮಾಡಬೇಕು. ವಿದ್ಯಾರ್ಥಿನಿಯರು ರಜೆ ಮೇಲೆ ತೆರಳಿದ ಸಂದರ್ಭದಲ್ಲಿ ಪೋಷಕರ ಮೋಬೈಲ್ ಸಂಖ್ಯೆಗೆ ವಿಡಿಯೋ ಕರೆ ಮಾಡಿ ಸುರಕ್ಷಿತವಾಗಿ ವಿದ್ಯಾರ್ಥಿನಿ ಮನೆ ತಲುಪಿದ ಕುರಿತು ಖಾತರಿ ಪಡಿಸಿಕೊಳ್ಳಬೇಕು.
ಮುಖ್ಯವಾಗಿ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹತ್ತಿರ ಪೊಲೀಸ್ ಠಾಣೆಯಿಂದ ಬೀಟ್ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು. ವಿದ್ಯಾರ್ಥಿನಿಲಯದ ಮುಖ್ಯದ್ವಾರದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ, ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ನಿಲಯದ ಮೇಲ್ವಿಚಾರಕರು ದೂರು ನೀಡಬೇಕು.
ನಿಲಯ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಕಡ್ಡಾಯವಾಗಿ ನಿಲಯದಲ್ಲಿ ಹಾಜರಿದ್ದು ವಿದ್ಯಾರ್ಥಿಗಳ ಚಲನಾ-ವಲನಾಗಳ ಮೇಲೆ ಗಮನ ಇರಿಸಿಬೇಕು. ರಾತ್ರಿ ಕಾವಲುಗಾರರು ಸಂಜೆ 5 ಗಂಟೆಗೆ ಕರ್ತವ್ಯಕ್ಕೆ ಹಾಜರಿಗಿ ಮಾರನೇ ದಿನ ಬೆಳಿಗ್ಗೆ 7 ಗಂಟೆಗೆ ಕರ್ತವ್ಯದಿಂದ ತೆರಳಬೇಕು. ವಿದ್ಯಾರ್ಥಿಗಳು ಮೊಬೈಲ್ ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
ವಿದ್ಯಾರ್ಥಿ ನಿಲಯದಲ್ಲಿಪ್ರತಿ 3 ತಿಂಗಳಿಗೊಮ್ಮೆ ಸಹಾಯಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಮಾನಸಿಕ ಸಧೃಡತೆ ಕುರಿತು ನುರಿತ ತಜ್ಞರಿಂದ ಅರಿವು ಮೂಡಿಸುವ ಕಾರ್ಯಗಾರ ಆಯೋಜಿಸಬೇಕು. ಕಾರ್ಯಗಾರದ ಛಾಯಾಚಿತ್ರಗಳೊಂದಿಗೆ ತಪ್ಪದೇ ರಿಜಿಸ್ಟರ್‍ನಲ್ಲಿ ನಮೂದಿಸಬೇಕು.
ಮಾನಸಿಕ ತಪಾಸಣೆ ವೇಳೆ ಒತ್ತಡ, ಖಿನ್ನತೆಗೊಳಗಾದ ವಿದ್ಯಾರ್ಥಿನಿಯರಿಗೆ ನುರಿತ ಸಮಾಲೋಚಕರಿಂದ ಚಿಕಿತ್ಸೆ ಕೊಡಿಸಬೇಕು. ಜಿ.ಪಂ.ಸಿಇಓ ಅವರು ನೀಡಿದ ಸುತ್ತೋಲೆಯನ್ನು ನಿಲಯ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ತಪ್ಪದೇ ಪಾಲನೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.