September 14, 2025
1756904471496.jpg


ಚಿತ್ರದುರ್ಗಸೆ.03:
ಚಿಕನ್‍ಗುನ್ಯಾ ಒಂದು ಸೋಂಕಿತ ಈಡೀಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆ ಮನುಷ್ಯರನ್ನು ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ವೈರಸ್‍ನಿಂದ ಬರುವ ಒಂದು ಸಾಂಕ್ರಾಮಿಕ ರೋಗ. ಭಯ ಬೇಡ ಮುಂಜಾಗ್ರತೆ ಇರಲಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ದೊಡ್ಡ ಸಿದ್ದವ್ವನಹಳ್ಳಿ, ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗೊಲ್ಲನಕಟ್ಟೆ ಗ್ರಾಮದಲ್ಲಿ ಚಿಕನ್‍ಗುನ್ಯಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ರೋಗ ನಿಯಂತ್ರಣ ಕುರಿತು ಮಾಹಿತಿ ನೀಡುತ್ತಾ ಅವರು ಮಾತನಾಡಿದರು.
ಗೊಲ್ಲನಕಟ್ಟೆ ಗ್ರಾಮದಲ್ಲಿ ಕಳೆದ ಆಗಸ್ಟ್ 26ರಂದು ಸಾರ್ವಜನಿಕರಿಗೆ ಜ್ವರ, ಕೀಲು ಮೂಳೆ ನೋವು ಮತ್ತು ಊತ ಕಂಡು ಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಆಗಸ್ಟ್ 27ರಂದು ಗ್ರಾಮದಲ್ಲಿ ಇರುವ 181 ಮನೆಗಳಲ್ಲಿ ಜ್ವರ ಸಮೀಕ್ಷೆ ಮಾಡಿದಾಗ 15 ಜನರಿಗೆ ಮೈ ಕೈ ನೋವು, ಕೀಲು ನೋವು ಅಂತಹ ಲಕ್ಷಣಗಳು ಕಂಡು ಬಂದಾಗ, ಐದು ಜನರ ರಕ್ತದ ಮಾದರಿ ಸಂಗ್ರಹಿಸಿ ಜಿಲ್ಲಾ ಪ್ರಯೋಗ ಶಾಲೆಯಲ್ಲಿ ಪರೀಕ್ಷಿಸಲಾಗಿ, ನಾಲ್ಕು ಜನರಿಗೆ ಚಿಕನ್‍ಗುನ್ಯಾ ಸೋಂಕು ಇರುವುದಾಗಿ ಕಂಡುಬಂದಿದೆ. ಲಾರ್ವ ಸಮೀಕ್ಷಾ ಕಾರ್ಯ ಕೈಗೊಂಡು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಗ್ರಾಮದ ಪಂಚಾಯಿತಿ ಸದಸ್ಯರಾದ ತಿಮ್ಮಣ್ಣ ಮತ್ತು ಚಿಕ್ಕಣ್ಣ ಹಾಗೂ ಸಾರ್ವಜನಿಕರ ಸಹಕಾರ ಪಡೆದು ಡಾ ಶಮೈಲಾ ಮತ್ತು ತಂಡ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಗ್ರಾಮದಲ್ಲಿ ತೆರೆದು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ಮಾಹಿತಿ ನೀಡುತ್ತಾ, ಈ ದಿನ ಹೊಸ ರೋಗಿ ಒಬ್ಬರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಆದರೆ ಚಿಕನ್‍ಗುನ್ಯಾ ಬಂದ ನಂತರ ಕೆಲವು ದಿನಗಳವರೆಗೆ ಕೀಲು ನೋವುಗಳು ಇರುವುದು ಸಹಜ. ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು .
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಕರಪತ್ರಗಳ ಹಂಚಿಕೆ ಮಾಡಿ ಮಾಹಿತಿ ನೀಡುತ್ತಾ, ಸಾರ್ವಜನಿಕರು ಸೊಳ್ಳೆ ಕಚ್ಚಿಸಿಕೊಳ್ಳದಂತೆ ನಿಗಾ ವಹಿಸಬೇಕು. ಸಂಜೆ ವೇಳೆ ಬೇವಿನ ಹೊಗೆ ಹಾಕುವುದು, ತುಂಬು ತೋಳಿನ ಬಟ್ಟೆ ಧರಿಸುವುದು, ಮಕ್ಕಳು, ವಯಸ್ಸಾದವರು ಹಗಲು ಹೊತ್ತು ಮಲಗಿದಾಗ ಸೊಳ್ಳೆ ಪರದೆ ಬಳಕೆ ಮಾಡಬೇಕು, ಮನೆಯಲ್ಲಿನ ಸೊಳ್ಳೆ ಉತ್ಪತ್ತಿ ನೀರಿನ ತಾಣಗಳ ಸ್ವಚ್ಛತೆಗೆ ಆದ್ಯತೆ ನೀಡುತ್ತಾ, ಮಳೆಗಾಲವಾದ್ದರಿಂದ ಮನೆಯ ಹೊರಗಡೆ ಘನ ತ್ಯಾಜ್ಯ ವಿಲೇವಾರಿ ಮಾಡಿದಾಗ ರೋಗ ನಿಯಂತ್ರಣ ಮಾಡಬಹುದೆಂದರು.
ಈ ಸಂದರ್ಭದಲ್ಲಿ ಎನ್‍ವಿಬಿಡಿಸಿಪಿ ತಂಡದ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಸುರೇಶ್ ಬಾಬು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ನಾಗರಾಜ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಬಾಗೇಶ್ ಉಗ್ರಾಣ, ನಾಗರಾಜ ಗ್ರಾಮದಲ್ಲಿ ರೋಗ ನಿಯಂತ್ರಣಕ್ಕೆ ಫಾಗಿಂಗ್ ಮತ್ತು ಮುಂಜಾಗ್ರತಾ ಕ್ರಮವಹಿಸಿದ್ದು, ಯೋಗ ಶಿಕ್ಷಕರಾದ ರವಿಕುಮಾರ್ ಯೋಗಾಸನ ಮಾಡಿಸಿದರು. ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading