ಚಳ್ಳಕೆರೆ: ತಾಲ್ಲೂಕಿನ ಶೇಂಗಾ ಹಾಗೂ ತೊಗರಿ ಬೆಳೆಗಾರರಿಗೆ 2025–26ನೇ ಸಾಲಿನ ಋತುಮಧ್ಯ ಪ್ರತಿಕೂಲತೆ ಹಿನ್ನೆಲೆಯಲ್ಲಿ ಜಂಟಿ ಸಮೀಕ್ಷೆಯ ವರದಿ ಆಧರಿಸಿ ತೊಗರಿ ಬೆಳೆಗೆ ಮಧ್ಯಂತರ ಪರಿಹಾರವಾಗಿ ಶೇ.25ರಷ್ಟು ಬೆಳೆವಿಮೆ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ತಾಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ವತಿಯಿಂದ ಬೆಂಗಳೂರು ಕೃಷಿ ಇಲಾಖೆ ಕೇಂದ್ರ ಕಚೇರಿಯ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಡಾ. ಶಿವಲಿಂಗಪ್ಪ ಅವರು, ಚಳ್ಳಕೆರೆ ತಾಲ್ಲೂಕಿನಲ್ಲಿ 2025–26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ತೊಗರಿ ಬೆಳೆಗೆ ಐದು ವಾರಗಳ ಕಾಲ ತೀವ್ರ ಮಳೆ ಕೊರತೆ ಉಂಟಾಗಿ ದೀರ್ಘಕಾಲದ ತೇವಾಂಶ ಕೊರತೆ ಎದುರಾಗಿದೆ. ಇದರ ಪರಿಣಾಮವಾಗಿ ತೊಗರಿ ಬೆಳೆಯ ಇಳುವರಿ ಶೇ.50ಕ್ಕಿಂತ ಕಡಿಮೆಯಾಗಿದ್ದು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆವಿಮೆ ಮಾಡಿಸಿರುವ ರೈತರಿಗೆ ಮಧ್ಯಂತರ ಪರಿಹಾರವಾಗಿ ಶೇ.25ರಷ್ಟು ಮೊತ್ತವನ್ನು ಮುಂಚಿತವಾಗಿ ನೀಡಬೇಕಾಗಿದೆ ಎಂದು ಹೇಳಿದರು.
ಆದರೆ ಬೆಳೆವಿಮೆ ಕಂಪನಿಯಾದ ಓರಿಯಂಟಲ್ ಜನರಲ್ ಇನ್ಸೂರೆನ್ಸ್ ಕಂಪನಿಯವರು ಜಿಲ್ಲಾಧಿಕಾರಿಗಳ ಸೂಚನೆಗಳನ್ನು ಮಾನ್ಯ ಮಾಡದೇ ಜಂಟಿ ಸಮೀಕ್ಷೆಗೆ ಅಸಹಕಾರ ತೋರಿದ್ದು, ಗೈರುಹಾಜರಾಗುವ ಮೂಲಕ ಸರ್ಕಾರದ ಮಹತ್ವಾಕಾಂಕ್ಷಿ ಬೆಳೆವಿಮೆ ಯೋಜನೆಯ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದರಿಂದ ಬೆಳೆವಿಮೆದಾರ ರೈತರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದರು.
ಆದ್ದರಿಂದ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ರೈತರಿಗೆ ಅನ್ಯಾಯವಾಗದಂತೆ ಶೇ.25ರಷ್ಟು ಮಧ್ಯಂತರ ಬೆಳೆವಿಮೆ ಪರಿಹಾರವನ್ನು ಬೇಷರತ್ತಾಗಿ ನೀಡುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಂಬಂಧಿಸಿದ ಬೆಳೆವಿಮೆ ಕಂಪನಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಶಾಸಕ ಟಿ. ರಘುಮೂರ್ತಿ ಹಾಗೂ ಕೃಷಿ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಎಂ. ಕರಿಯಪ್ಪ, ಎಸ್. ಪ್ರಕಾಶ್, ಆರ್.ಎ. ದಯಾನಂದಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.