ಚಳ್ಳಕೆರೆ:
ಕೇಂದ್ರ ಸರ್ಕಾರ ಮನರೇಗಾ ಯೋಜನೆಗೆ ಬದಲಾಗಿ ಜಾರಿಗೆ ತಂದಿರುವ ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಹೋರಾಟ ಜನರ ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಆರೋಪಿಸಿದರು.






ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ ರಾಮ್ ಜಿ ಕಾಯ್ದೆ ಜಾರಿಗೆ ಬಂದ ಬಳಿಕ ಕೂಲಿ ಕಾರ್ಮಿಕರಿಗೆ 125 ದಿನಗಳ ಹೆಚ್ಚುವರಿ ಉದ್ಯೋಗ ಹಾಗೂ ಪ್ರತಿ ದಿನ 375 ರೂ. ಕೂಲಿ ಲಭ್ಯವಾಗುತ್ತಿದೆ. ಇಂತಹ ಕಾರ್ಮಿಕ ಹಿತ ಯೋಜನೆಯನ್ನು ಕಾಂಗ್ರೆಸ್ ಪಕ್ಷ ಟೀಕಿಸುತ್ತಿರುವುದು ಸರಿಯಲ್ಲ ಎಂದರು.
ಶಾಸಕ ಟಿ. ರಘುಮೂರ್ತಿ ಅವರು ಶನಿವಾರ ದೊಡ್ಡೇರಿಯಿಂದ ಚಳ್ಳಕೆರೆಯವರೆಗೆ ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ಪಾದಯಾತ್ರೆ ನಡೆಸಿರುವುದು ಅವರ ಘನತೆಗೆ ಶೋಭೆಯಲ್ಲ. ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ 100 ದಿನಗಳ ಉದ್ಯೋಗ ನೀಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಅದನ್ನು 125 ದಿನಗಳಿಗೆ ಹೆಚ್ಚಿಸಿ ಕೂಲಿ ಮೊತ್ತವನ್ನೂ ಹೆಚ್ಚಿಸಿದೆ ಎಂದು ಸ್ಪಷ್ಟಪಡಿಸಿದರು.
ಈ ಕಾಯ್ದೆಯಿಂದ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ಸೃಷ್ಟಿಗೆ ಅವಕಾಶ ದೊರೆಯುತ್ತಿದ್ದು, ಗ್ರಾಮ ಸಭೆಗಳಲ್ಲಿ ಕಾಮಗಾರಿಗಳನ್ನು ನಿರ್ಧರಿಸಲಾಗುತ್ತದೆ. ಶಾಶ್ವತ ಆಸ್ತಿಗಳ ನಿರ್ಮಾಣದ ಜೊತೆಗೆ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾದ ಯೋಜನೆಯಾಗಿದೆ. ಹಿಂದೆ ಇದ್ದ ವಿಕೇಂದ್ರೀಕೃತ ವ್ಯವಸ್ಥೆಯನ್ನು ಈಗ ಸಂಘಟಿತ ಪ್ರಕ್ರಿಯೆಯಾಗಿ ರೂಪಿಸಲಾಗಿದೆ. ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳನ್ನು ತಾಲೂಕು, ಜಿಲ್ಲೆ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಯೋಜನೆ ಮಾಡಲಾಗುತ್ತಿದೆ. ಇಂತಹ ಭ್ರಷ್ಟಾಚಾರರಹಿತ ನೀತಿಗಳು ಕಾಂಗ್ರೆಸ್ ಪಕ್ಷಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗದೆ ಜನರಿಗೆ ತಪ್ಪು ಸಂದೇಶ ರವಾನಿಸಲಾಗುತ್ತಿದೆ ಎಂದು ಆರೋಪಿಸಿದರು.
ವಾಲ್ಮೀಕಿ ಭವನ, ಜಗಜೀವನ್ ರಾಮ್ ಭವನ ಲೋಕಾರ್ಪಣೆಗೊಳಿಸಲಿ
ಶಾಸಕ ರಘುಮೂರ್ತಿ ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ನಿರ್ಮಿಸಿದ ವಾಲ್ಮೀಕಿ ಭವನ ಹಾಗೂ ಜಗಜೀವನ್ ರಾಮ್ ಭವನಗಳನ್ನು, ಮೂರು ಬಾರಿ ಶಾಸಕರಾಗಿದ್ದರೂ ಲೋಕಾರ್ಪಣೆ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಪರಿಶಿಷ್ಟ ಜಾತಿ–ಪಂಗಡಗಳ ಜನರಿಗೆ ಅನ್ಯಾಯವಾಗಿದೆ. ಮೊದಲು ಅದನ್ನು ಸರಿಪಡಿಸಲಿ ಎಂದು ಒತ್ತಾಯಿಸಿದರು.
ನಗರಸಭೆ ಕಾಂಗ್ರೆಸ್ ಕೈಗೊಂಬೆ
ಚಳ್ಳಕೆರೆ ನಗರಸಭೆಯ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಮುಖಂಡರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಸಾಮಾನ್ಯ ಜನರಿಗೆ ಸ್ವತ್ತು ನೀಡಲು ಆರು ತಿಂಗಳುಗಳ ಕಾಲ ಸತಾಯಿಸುವ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣಕ್ಕೆ ರಾತ್ರೋರಾತ್ರಿ ಸ್ವತ್ತು ನೀಡುತ್ತಿದ್ದಾರೆ. ಇದರಿಂದ ನಗರಸಭೆ ಕಾಂಗ್ರೆಸ್ ಪಕ್ಷದ ವಶವಾಗಿದೆ ಎಂದು ಟೀಕಿಸಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಶ್ ಲೇವಡಿ
ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಶ್ ಮಾತನಾಡಿ, ಮನರೇಗಾ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರ ತಡೆಗಟ್ಟುವ ಉದ್ದೇಶದಿಂದಲೇ ಜಿ ರಾಮ್ ಜಿ ಕಾಯ್ದೆ ಜಾರಿಗೆ ತರಲಾಗಿದೆ. 125 ದಿನಗಳ ಕಾಲ ಪ್ರತಿ ದಿನ 375 ರೂ. ಕೂಲಿ ನೀಡಿ, ವರ್ಷಕ್ಕೆ 46,875 ರೂ. ಆದಾಯ ದೊರೆಯುವಂತೆ ಮಾಡಲಾಗಿದೆ. ಇಂತಹ ಯೋಜನೆಗಳನ್ನು ವಿರೋಧಿಸಿ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳೇ ಶ್ರೇಷ್ಠವೆಂದು ಹೇಳಿಕೊಳ್ಳುತ್ತಿದೆ. ಕೇವಲ ಪಕ್ಷವನ್ನು ಮೆಚ್ಚಿಸುವ ಉದ್ದೇಶದಿಂದ ಹಾಗೂ ಕಾರ್ಯಕರ್ತರಿಗೆ ಅನುಕೂಲ ಕಲ್ಪಿಸಲು ಪಾದಯಾತ್ರೆ ನಡೆಸಿ ಜನರ ಕಣ್ಣೋರೆಸುವ ಕೆಲಸ ಮಾಡಲಾಗುತ್ತಿದೆ ಎಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರಾಮದಾಸ್, ಮಂಜುನಾಥ್, ಈಶ್ವರ ನಾಯಕ್, ದಿನೇಶ್ ರೆಡ್ಡಿ, ಕೃಷ್ಣ, ಡಾ. ರಾಮರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.