ಹಿರಿಯೂರು
ವಾಣಿವಿಲಾಸ ಸಾಗರ (ವಿವಿ ಸಾಗರ) ಜಲಾಶಯ ಈ ವರ್ಷ ಸಂಪೂರ್ಣ ಭರ್ತಿಯಾಗಿದ್ದರೂ ಸಹ ಅಚ್ಚುಕಟ್ಟು ಪ್ರದೇಶಕ್ಕೆ ಅಗತ್ಯ ಪ್ರಮಾಣದ ನೀರನ್ನು ಹರಿಸಲಾಗದೆ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ವಿ.ವಿ. ಸಾಗರ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಕಸವನಹಳ್ಳಿ ರಮೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ತೆಂಗು, ಅಡಿಕೆ, ಬಾಳೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು, ಧಾನ್ಯ ಬೆಳೆಗಳು ಹಾಗೂ ಕುಡಿಯುವ ನೀರಿಗೆ ಅಗತ್ಯವಾದ ಅಂತರ್ಜಲ ಮಟ್ಟ ಹೆಚ್ಚಳವಾಗಲೆಂದು ಈ ಅವಧಿಯಲ್ಲಿ ಕನಿಷ್ಠ ಅರ್ಧ ಪ್ರಮಾಣದ ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಬೇಕಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ರೈತರ ಬದುಕನ್ನು ಒಣಗಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿದರೆ ಜಿಲ್ಲಾಧಿಕಾರಿಗಳ ಕಡೆಗೆ ತೋರಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳನ್ನು ಕೇಳಿದರೆ ಇಂಜಿನಿಯರ್‌ಗಳು ಹಾಗೂ ಉಸ್ತುವಾರಿ ಸಚಿವರ ಮೇಲೆ ಹೊಣೆ ಹಾಕಲಾಗುತ್ತಿದೆ. ಈ ರೀತಿ ಒಬ್ಬರ ಮೇಲೆ ಒಬ್ಬರು ಸಬೂಬು ಹೇಳುತ್ತಾ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅವರಿಗೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ರೈತ ಸಂಘಟನೆಗಳು ಹಾಗೂ ನಿಮ್ಮದೇ ಅಧ್ಯಕ್ಷತೆಯಲ್ಲಿರುವ ನೀರಾವರಿ ಸಲಹಾ ಸಮಿತಿಯ ಸದಸ್ಯರು ಸಹ ಅರ್ಜಿ ನೀಡಿದ್ದಾರೆ. ಆದರೂ ಇಲ್ಲಿಯವರೆಗೂ ನೀರು ಹರಿಸುವ ಕುರಿತು ಸಭೆಯನ್ನು ಕರೆಯಲಾಗಿಲ್ಲ, ಯಾವುದೇ ತೀರ್ಮಾನವೂ ಕೈಗೊಳ್ಳಲಾಗಿಲ್ಲ ಎಂದು ರಮೇಶ್ ಬೇಸರ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ತಕ್ಷಣವೇ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಕುರಿತು ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ವಾರದಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿಯ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ, ಕುನ್ನಿಕೆರೆ ಅಶೋಕ್, ರಾಮಚಂದ್ರ ಕಸವನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.