ಹೊಸದುರ್ಗ
ಸಮಾಜದ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಂತೆ ವಿವಿಧ ಯೋಜನೆಗಳನ್ನು ನೀಡುತ್ತ, ಸಮಾಜದ ಸಮಗ್ರ ಏಳಿಗೆಗೆ ನಿರಂತರವಾಗಿ ಶ್ರಮಿಸುವ ಸಂಸ್ಥೆ ಎಂದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ಕಾರ್ಯನಿರತ ಪತ್ರಕರ್ತರ ಸಂಘ, ಚಿತ್ರದುರ್ಗ ಜಿಲ್ಲಾ ಉಪಾಧ್ಯಕ್ಷ ನಾಗತಿಹಳ್ಳಿ ಮಂಜುನಾಥ್ ಅಭಿಪ್ರಾಯಪಟ್ಟರು.
ಅವರು ಕಬ್ಬಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮೆನಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ 2 ಲಕ್ಷ ರೂ. ಡಿ.ಡಿ. ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರ್ಯಾಯ ಸರ್ಕಾರದಂತೆ ಕೆಲಸ ಮಾಡುತ್ತಿದ್ದು, ಸಮುದಾಯಗಳ ಅಭಿವೃದ್ಧಿಯ ಜೊತೆಗೆ ಮಹಿಳಾ ಸಬಲೀಕರಣಕ್ಕೂ ವಿಶೇಷ ಒತ್ತು ನೀಡುತ್ತಿದೆ. ಈ ರೀತಿಯಾಗಿ ಧಾರ್ಮಿಕ ಕ್ಷೇತ್ರಗಳು ಸಮಾಜದ ಅಭಿವೃದ್ಧಿಗೆ ಕೈಜೋಡಿಸಿದಾಗ ದೇಶದ ಅಭಿವೃದ್ಧಿ ಸುಲಭವಾಗಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಯೋಜನಾಧಿಕಾರಿ ಶಿವಣ್ಣ ಎಸ್. ಮಾತನಾಡಿ, 5G ಯುಗದಲ್ಲಿ ಯುವಜನತೆ ಮೊಬೈಲ್, ರೀಲ್ಸ್ ಹಾಗೂ ಅನಗತ್ಯ ಆಕರ್ಷಣೆಗಳಿಗೆ ಮಾರು ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರಗಳು ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿಗಳ ಹಿರಿಯರು ಯುವಕರನ್ನು ಗ್ರಾಮಾಭಿವೃದ್ಧಿಯತ್ತ ಸೆಳೆಯಬೇಕು.
ದೇವಸ್ಥಾನ ಮಂಡಳಿಗಳು ಹಾಗೂ ಗ್ರಾಮಾಭಿವೃದ್ಧಿ ಸಮಿತಿಗಳಲ್ಲಿ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡರೆ ಅನಗತ್ಯ ಕೃತ್ಯಗಳನ್ನು ತಡೆಯಲು ಸಾಧ್ಯ. ಅಲ್ಲದೆ ಯುವಕರಿಗೂ ಯುವತಿಯರಿಗೂ ದೇವಸ್ಥಾನಗಳ ಜವಾಬ್ದಾರಿಯನ್ನು ಹಸ್ತಾಂತರಿಸಿದಾಗ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ದೇವಸ್ಥಾನ ಸಮಿತಿಯವರು ಧರ್ಮಸ್ಥಳಕ್ಕೆ ದಾಖಲೆಗಳನ್ನು ಸಲ್ಲಿಸಿದ ಕೇವಲ ಒಂದು ವಾರದಲ್ಲೇ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 2 ಲಕ್ಷ ರೂ. ಸಹಾಯಧನವನ್ನು ಮಂಜೂರು ಮಾಡಿದ್ದಾರೆ ಎಂದು ವಿವರಿಸಿದರು.
ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಅಧ್ಯಕ್ಷ ಪರಮೇಶ್ವರಪ್ಪ ಮಾತನಾಡಿ, ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯ ಅಗತ್ಯವಿದ್ದು, ಕಾಮಗಾರಿ ಅರ್ಧದಲ್ಲಿ ನಿಂತಿತ್ತು. ಧರ್ಮಸ್ಥಳ ಕ್ಷೇತ್ರದಿಂದ ಲಭಿಸಿದ ಈ ಸಹಾಯಧನದಿಂದ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿದ್ದು, ಇದು ನಮ್ಮ ಗ್ರಾಮಕ್ಕೆ ಸಂತೋಷ ತಂದಿದೆ ಎಂದರು. ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿಯುವಂತಹ ಕೃತ್ಯಗಳಲ್ಲಿ ತೊಡಗುವವರಿಗೆ ಗ್ರಾಮಸ್ಥರ ತೀವ್ರ ದಿಕ್ಕಾರವಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬೋರೇಶ್, ರೈತ ಸಂಘದ ಅಧ್ಯಕ್ಷ ಕಾಂತರಾಜು, ಪ್ರಕಾಶ್, ಶಿವಮೂರ್ತಿ, ಚಂದ್ರಮ್ಮ, ರಮೇಶ್, ಬಸವರಾಜು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.