ಚಿತ್ರದುರ್ಗ.ಫೆ.03:
ಅಂಗವಾಡಿ ಕೇಂದ್ರಗಳಲ್ಲಿ ತಿಂಗಳ ಒಳಗಾಗಿ ಶೌಚಾಲಯ, ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಸಿಡಿಪಿಓಗಳು ವರದಿ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಕುರಿತು ಜರುಗಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲಜೀವನ್ ಮಿಷನ್ ಅಡಿಯಲ್ಲಿ ಗ್ರಾಮೀಣ ಭಾಗದ ಎಲ್ಲ ಅಂಗನವಾಡಿಗಳಿಗೆ ಕುಡಿಯುವ ನೀರಿನ ಸಂಕರ್ಪವನ್ನು ಕಲ್ಪಿಸಲಾಗುತ್ತಿದೆ. ಆದರೂ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ 38 ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ಸಂಪರ್ಕ ಇಲ್ಲ ಎಂದರೆ ಹೇಗೆ? ಕುಡಿಯುವ ನೀರಿನ ಸಂಪರ್ಕ ಇಲ್ಲದ ಅಂಗನವಾಡಿಗಳ ವಿವರವನ್ನು ಜಿಲ್ಲಾ ಪಂಚಾಯಿತಿ ಸಿಇಓ, ತಾಪಂ ಇಓ ಹಾಗೂ ಪಿಡಿಓಗಳ ಗಮನಕ್ಕೆ ತಂದು ಕೂಡಲೇ ನೀರಿನ ಸಂಪರ್ಕ ಕಲ್ಪಿಸಬೇಕು. ಶೌಚಾಲಯಗಳು ಇಲ್ಲದ ಅಂಗನವಾಡಿ ಕೇಂದ್ರಗಳಲ್ಲಿ ಕೂಡಲೇ ಶೌಚಾಲಯಗಳನ್ನು ನಿರ್ಮಿಸಬೇಕು. ವಿದ್ಯುತ್ ಸಂಪರ್ಕ ಇಲ್ಲದ 124 ಅಂಗನವಾಡಿ ಕೇಂದ್ರಗಳಿಗೆ ಬೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್‍ಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕೆ.ಎಂ.ಇ.ಆರ್.ಸಿ ಅಡಿ ನಿವೇಶನ ಲಭ್ಯ ಇರುವ 147 ಸ್ಥಳಗಳಲ್ಲಿ ನೂತನ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ನೀಡಲಾಗಿದೆ. ಇದರ ಹೊರತು ವಿವಿಧ ಯೋಜನೆಗಳಡಿ ನಿರ್ಮಿತಿ, ಪಿ.ಆರ್.ಇ.ಡಿ. ಹಾಗೂ ಕೆ.ಆರ್.ಐ.ಡಿ.ಎಲ್ ವತಿಯಿಂದ ನಿರ್ಮಿಸುತ್ತಿರುವ ಅಂಗನವಾಡಿ ಕಟ್ಟಡಗಳ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ಪ್ರಾರಂಭಿಸದ 59 ಕಡೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದವರು ಕೂಡಲೇ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಬೇಕು. ಒಂದು ವೇಳೆ ಕಾಮಗಾರಿ ಆರಂಭಿಸದಿದ್ದರೆ ನಿರ್ಮಾಣ ಏಜೆನ್ಸಿ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರಗತಿಯಲ್ಲಿರುವ 35 ಕಾಮಗಾರಿಗಳನ್ನು ಪೂರ್ಣಗೊಳಿಸದೆ ಇರುವ ಗುತ್ತಿಗೆದಾರರ ಇತರೆ ಕಾಮಗಾರಿಗಳ ಬಿಲ್ ಪಾವತಿಸಬಾರದು. ಬಹಳಷ್ಟು ವರ್ಷಗಳಿಂದ ವಿವಿಧ ಯೋಜನೆಯಡಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸದೆ ಬಾಕಿ ಉಳಿಸಿಕೊಂಡಿರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ನೋಟಿಸ್ ನೀಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.
ವಿವಿಧ ಯೋಜನೆಗಳ ಅಡಿ ನಿರ್ಮಿತಿ ಕೇಂದ್ರಕ್ಕೆ 144, ಪಿ.ಆರ್.ಇ.ಡಿ 200 ಹಾಗೂ ಕೆ.ಆರ್.ಐ.ಡಿ.ಎಲ್ 20 ಅಂಗನವಾಡಿ ಕಟ್ಟಡ ನಿರ್ಮಿಸಲು ಗುರಿ ನಿಗದಿಪಡಿಸಲಾಗಿತ್ತು. ನಿರ್ಮಿತಿ ಕೇಂದ್ರ ವತಿಯಿಂದ 93 ಕಟ್ಟಡ ಪೂರ್ಣಗೊಳಿಸಲಾಗಿದೆ, 33 ಪ್ರಗತಿಯಲ್ಲಿವೆ, 18 ಕಾಮಗಾರಿಗಳು ಪ್ರಾರಂಭವಾಗಿಲ್ಲ. ಪಿ.ಆರ್.ಇ.ಡಿ ವತಿಯಿಂದ 106 ಕಟ್ಟಡಗಳನ್ನು ಪೂರ್ಣಗೊಳಿಸಲಾಗಿದೆ. 35 ಪ್ರಗತಿಯಲ್ಲಿದ್ದು, 59 ಕಾಮಗಾರಿಗಳನ್ನು ಪ್ರಾರಂಭವಾಗಿಲ್ಲ. ಕೆ.ಆರ್.ಐ.ಡಿ.ಎಲ್. 1 ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, 10 ಪ್ರಗತಿಯಲ್ಲಿವೆ, 9 ಕಾಮಗಾರಿಗಳನ್ನು ಪ್ರಾರಂಭವಾಗಿಲ್ಲ ಎಂದು ಉಪನಿರ್ದೇಶಕಿ ಭಾರತಿ ಬಣಕಾರ್ ಸಭೆಯಲ್ಲಿ ಮಾಹಿತಿ ನೀಡಿದರು.
ಅಪೌಷ್ಠಿಕ ಮಕ್ಕಳ ಚಿಕಿತ್ಸೆಗೆ ಸೂಚನೆ:
ಮಕ್ಕಳ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ, ಜಿಲ್ಲಾದ್ಯಂತ ತೀವ್ರ ಕಡಿಮೆ ತೂಕ ಹೊಂದಿರುವ ಮಕ್ಕಳನ್ನು ಗುರುತಿಸಬೇಕು. ಹೀಗೆ ಗುರುತಿಸಿದ ಮಕ್ಕಳಿಗೆ ಎನ್.ಆರ್.ಸಿ ಕೇಂದ್ರಗಳಿಗೆ ದಾಖಲಿಸಿ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 144 ತೀವ್ರ ಕಡಿಮೆ ತೂಕದ ಮಕ್ಕಳು ಪತ್ತೆಯಾಗಿವೆ. ಇದುವರೆಗೂ 176 ಮಕ್ಕಳಿಗೆ ಎನ್.ಆರ್.ಸಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅನಿಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಔಷದೋಪಚಾರಗಳನ್ನು ನೀಡಲಾಗುತ್ತಿದೆ. ವೀಪರೀತ ಕಡಿಮೆ ತೂಕದ ಮಕ್ಕಳು ಎನ್.ಆರ್.ಸಿ ಕೇಂದ್ರಗಳಿಗೆ ದಾಖಲಾದರೆ 15 ದಿನ ಪ್ರೋಟಿನ್‍ಯುಕ್ತ ಆಹಾರ ನೀಡಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್ ಸಭೆಯಲ್ಲಿ ತಿಳಿಸಿದರು.
ವಿಪರೀತ ಕಡಿಮೆ ತೂಕ ಹೊಂದಿದ ಮಕ್ಕಳಿಗೆ ಪ್ರತಿ ದಿನ ಒಂದುವರೆ ಪಟ್ಟು ಹೆಚ್ಚು ಆಹಾರವನ್ನು ನೀಡಲಾಗುತ್ತಿದೆ. ಇದರೊಂದಿಗೆ ವಾರಕ್ಕೆ 5 ಮೊಟ್ಟೆ ಹಾಗೂ 200 ಮಿ.ಲೀ ಹಾಲು ಸಹ ನೀಡಲಾಗುತ್ತಿದೆ ಎಂದು ಉಪನಿರ್ದೇಶಕಿ ಭಾರತಿ ಬಣಕಾರ್ ತಿಳಿಸಿದರು.
22 ಬಾಲ್ಯವಿವಾಹ ತಡೆ, 12 ಪ್ರಕರಣಗಳಲ್ಲಿ ದೂರು ದಾಖಲು:
ಕಳೆದ ಅಕ್ಟೋಬರ್ ನಿಂದ ಡಿಸೆಂಬರ್‍ವರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಾಲ್ಯ ವಿವಾಹ ಕುರಿತು 34 ದೂರು ಕೇಳಿ ಬಂದಿದ್ದವು. ಇವುಗಳಲ್ಲಿ 22 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. 12 ಪ್ರಕರಣಗಳಲ್ಲಿ ಬಾಲ್ಯ ವಿವಾಹ ನಡೆದಿದ್ದು ಪೊಲೀಸ್ ದೂರು ನೀಡಿ ಎಫ್.ಐ.ಆರ್ ದಾಖಲಿಸಲಾಗಿದೆ. ಜಿಲ್ಲಾ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ 33, ಬಾಲಕಿಯರ ಬಾಲಮಂದಿರದಲ್ಲಿ 37 ಹಾಗೂ ಸರ್ಕಾರಿ ವೀಕ್ಷಣಾಲಯದಲ್ಲಿ 07 ಮಕ್ಕಳು ಆಶ್ರಯ ಪಡೆದಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಸಭೆಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದ್ದು, ಇವುಗಳನ್ನು ತಡೆಯಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು. ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುವ ಗ್ರಾಮ ಸಹಾಯಕರು, ನೀರುಗಂಟಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಜಾಲ ಬಳಸಿ ಬಾಲ್ಯ ವಿವಾಹಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಪ್ರತಿ ಗ್ರಾಮಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚಿಸಿ ತಪ್ಪದೆ ಸಭೆಗಳನ್ನು ನಡೆಸಬೇಕು. ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಬಾಲ್ಯ ವಿವಾಹ ಪ್ರಕರಣಗಳಲ್ಲಿ ಮುಲಾಜಿಲ್ಲದೇ ಪೊಲೀಸ್ ದೂರು ನೀಡಿ ಎಫ್.ಐ.ಆರ್ ದಾಖಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.
ಸಭೆಯಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ, ಸಾಂತ್ವನ, ಸಖಿ ಒನ್ ಸ್ಟಾಪ್ ಸೆಂಟರ್‍ಗಳಲ್ಲಿ ದಾಖಲಾದ ದೂರುಗಳ ಕುರಿತು ಚರ್ಚಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿ.ಪಂ. ಸಿಪಿಓ ಗಾಯತ್ರಿ, ಡಿಹೆಚ್‍ಓ ಡಾ.ರೇಣುಪ್ರಸಾದ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶೀಲಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.