January 29, 2026
IMG-20260103-WA0133.jpg

ಪಿ. ಮಹದೇವಪುರ ಗ್ರಾಮದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ – ಧಾರ್ಮಿಕ-ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ
ಪಿ. ಮಹದೇವಪುರ ಗ್ರಾಮದಲ್ಲಿ ಶ್ರೀ ಮಂಜುನಾಥ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಭಕ್ತಿಭಾವದಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಿತ್ರದುರ್ಗ ವಲಯ ಮೇಲ್ವಿಚಾರಕರಾದ ಶ್ರೀಮತಿ ಗೀತಾ ಅವರು, ಈ ಕಾರ್ಯಕ್ರಮಕ್ಕಾಗಿ ರಾತ್ರಿ ಹಗಲು ಶ್ರಮಿಸಿದ ಕಾರ್ಯಕರ್ತರನ್ನು ವೇದಿಕೆಯಲ್ಲಿ ಸ್ಮರಿಸಿ ಅಭಿನಂದಿಸಿದರು. ಶ್ರೀ ಮಂಜುನಾಥ ಸ್ವಸಹಾಯ ಸಂಘವು ಧಾರ್ಮಿಕ ಕಾರ್ಯಗಳೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿ, ಮಾನ್ಯ ವೀರೇಂದ್ರ ಹೆಗ್ಗಡೆ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದರು.
ಮಹದೇವಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೀರೇಶ್ ಅವರು ಮಾತನಾಡಿ, ಇಂತಹ ಪುಣ್ಯದ ಕಾರ್ಯಗಳ ಮೂಲಕ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಂಘವು ಶ್ರಮಿಸುತ್ತಿರುವುದು ಸಂತೋಷದಾಯಕ ವಿಚಾರ ಎಂದು ಹೇಳಿದರು.
ಅತಿಥಿಯಾಗಿ ಭಾಗವಹಿಸಿದ್ದ ರೈತ ಮುಖಂಡ ನಾಗರಾಜ್ ಎ. (ಪರಶುರಾಂಪುರ) ಅವರು ಮಾತನಾಡಿ, ಧರ್ಮ ಮತ್ತು ದಾನಗಳ ಸಮ್ಮಿಲನವೇ ಧರ್ಮಸ್ಥಳ ಎಂದು ಹೇಳಿ, ಮನೆಗೊಂದು ಶೌಚಾಲಯ, ಕೃಷಿ, ಆರೋಗ್ಯ, ಮಹಿಳಾ ಸಬಲೀಕರಣ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಧರ್ಮಸ್ಥಳ ಸಂಸ್ಥೆ ತೊಡಗಿಸಿಕೊಂಡಿರುವುದು ಮೆಚ್ಚುವಂತದ್ದು ಎಂದರು. ಮಾನ್ಯ ವೀರೇಂದ್ರ ಹೆಗ್ಗಡೆ ಅವರು ಜೈನ ಸಮುದಾಯದವರಾಗಿದ್ದರೂ, 800 ವರ್ಷಗಳ ಇತಿಹಾಸವಿರುವ ಧರ್ಮಸ್ಥಳವನ್ನು ಹಿಂದೂ ಸಂಪ್ರದಾಯದಂತೆ ಸಂರಕ್ಷಿಸಿಕೊಂಡು ದೇಶದಾದ್ಯಂತ ಭಕ್ತರ ಮನಸ್ಸುಗಳನ್ನು ಬೆಸೆಯುತ್ತಿರುವುದು ಈ ಪುಣ್ಯಕ್ಷೇತ್ರದ ಮಹಿಮೆ ಎಂದು ತಿಳಿಸಿದರು.
ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿದ ಕುಟುಂಬಗಳಿಗೆ ಆರೋಗ್ಯ, ಐಶ್ವರ್ಯ ದೊರಕಲಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಶೀಘ್ರ ಪೂರ್ಣಗೊಂಡು ಈ ಭಾಗದ ಕೆರೆಗಳು ತುಂಬಲಿ ಎಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷ ಗೋವರ್ಧನ್ ಗೋಸಿಕೆರೆ, ನಾಗೇಂದ್ರಪ್ಪ, ಮೇಲ್ವಿಚಾರಕ ಪ್ರವೀಣ್, ಗ್ಯಾರಂಟಿ ಸಮಿತಿ ಸದಸ್ಯ ಅನಿಲ್ ಕುಮಾರ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತ್ಯಾಗರಾಜ್, ಉಪಾಧ್ಯಕ್ಷ ಓಬಳೇಶ್ ಸೇರಿದಂತೆ ಸಮಿತಿ ಸದಸ್ಯರು, ಧರ್ಮಾಧಿಕಾರಿಗಳು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading