September 16, 2025
FB_IMG_1733154496308.jpg


ಹಿರಿಯೂರು :
ಕುಂಚಿಟಿಗ ಜಾತಿಗೆ ಸೇರಿದ ಕೆಲವು ಜನ ಪಟ್ಟಭದ್ರ ಹಿತಾಸಕ್ತಿಯ ಸರ್ಕಾರಿ ನೌಕರರು ಸೇರಿಕೊಂಡು ಹಿರಿಯೂರು ತಾಲ್ಲೂಕು ಒಕ್ಕಲಿಗೆ ನೌಕರರ ಸಂಘ ಸ್ಥಾಪಿಸಿ 26 ಜನ ಪದಾಧಿಕಾರಿಗಳ ಆಯ್ಕೆ ಪಟ್ಟಿ ಪ್ರಕಟಿಸಿದ್ದಾರೆ. ಕುಂಚಿಟಿಗರ ನೈಜ ಜಾತಿ ರುಜುವಾತು ಪಡಿಸತಕ್ಕ ದಾಖಲೆಗಳ ಸಹಿತ ಸಂಘ ಸ್ಥಾಪನೆಯನ್ನು ಬಲವಾಗಿ ಖಂಡಿಸುತ್ತೇವೆ, ಪಟ್ಟಭದ್ರರು ಜಾತಿ ಬದಲಾವಣೆಗೆ ಪ್ರಚೋದನೆ ನೀಡುವ ಮೂಲಕ ಅಕ್ಷಮ್ಯ ಅಪರಾಧ ಮಾಡಿದ್ದಾರೆ ಎಂಬುದಾಗಿ ಕರ್ನಾಟಕ ಕುಂಚಿಟಿಗರ ಒಕ್ಕೂಟದ ರಾಜ್ಯ ಅಧ್ಯಕ್ಷ್ಯ ಕಸವನಹಳ್ಳಿ ರಮೇಶ್ ಆರೋಪಿಸಿದರು.
ನಗರದಲ್ಲಿ ಶನಿವಾರದಂದು ರಾಜ್ಯ ಕುಂಚಿಟಿಗರ ಒಕ್ಕೂಟ ಹಾಗೂ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಸಭೆಯಲ್ಲಿ ತಾಲ್ಲೂಕು ಒಕ್ಕಲಿಗ ನೌಕರರ ಸಂಘ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ, ನಂತರ, ಅವರು ಮಾತನಾಡಿದರು.
ನಮ್ಮ ಭಾರತದ ಸಂವಿಧಾನದಲ್ಲಿ ಜಾತಿ ಬದಲಾವಣೆಗೆ ಅವಕಾಶ ಇಲ್ಲ. ಕೆಸಿಎಸ್ಆರ್ ನಿಯಮ ಉಲ್ಲಂಘನೆ ಮಾಡಿ ಜಾತಿ ಆಧಾರಿತ ನೌಕರರ ಸಂಘ ಮಾಡಿ ಜಾತಿ ಆಧಾರಿತ ನೌಕರರ ಸಂಘ ಸ್ಥಾಪನೆ ಸರಿಯಲ್ಲ, ಯಾವುದೇ ಕಾರಣಕ್ಕೂ ತಾಲ್ಲೂಕು ಒಕ್ಕಲಿಗ ನೌಕರರ ಸಂಘ ಸ್ಥಾಪನೆ ಮಾಡಬಾರದು ಎಂಬುದಾಗಿ ಅವರು ಹೇಳಿದರು.
ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೈಸೂರು ಶಿವಣ್ಣ ಮಾತನಾಡಿ, ಕುಂಚಿಟಿಗರ ಜಾತಿಗೆ ಸೇರಿದ ಕೆಲವರು ತಪ್ಪು ತಿಳುವಳಿಕೆಯಿಂದ ಮೀಸಲಾತಿ ಆಸೆಗಾಗಿ ಅನ್ಯ ಜಾತಿಗಳತ್ತ ಮುಖ ಮಾಡಿದ್ದಾರೆ. ‘ ಮರಳಿ ಬಾ ಕುಂಚಿಟಿಗ’ ಕಾರ್ಯಕ್ರಮದ ಮೂಲಕ ಜಾತಿಗೆ ಕರೆತರುವ ಕೆಲಸವನ್ನು ಸಂಘದಿಂದ ಹಮ್ಮಿಕೊಂಡಿದ್ದೇವೆ. ಶಿಕ್ಷಣ ಇಲಾಖೆಯ ಆಯುಕ್ತರ ಸುತ್ತೋಲೆ ಪಡೆದು ಜಾತಿ ತಿದ್ದುಪಡಿ ಜನಾಂದೋಲನ ಮಾಡಲಾಗುತ್ತಿದೆ’ ಎಂಬುದಾಗಿ ಹೇಳಿದರು.
ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನಕಾರ ಎಸ್.ವಿ.ರಂಗನಾಥ್ ಮಾತನಾಡಿ, ಕುಂಚಿಟಿಗ ಜಾತಿ ಹಿಂದೂ ಧರ್ಮದಲ್ಲೇ ಒಂದು ಸ್ವತಂತ್ರ ಜಾತಿ ಇದು ಯಾವುದೇ ಜಾತಿಯ ಉಪಜಾತಿ ಅಲ್ಲವೇ ಅಲ್ಲ. ಪಿತೃ ಸಂಬಂಧಿಯ ಜಾತಿಯು ವ್ಯಕ್ತಿಯ ಸಾಮಾಜಿಕ ಸ್ಥಾನಮಾನಕ್ಕೆ ಪ್ರಮುಖ ಪುರಾವೆ ಎಂದು ಬಾಂಬೆ ಹೈಕೋರ್ಟ್ ಈಚೆಗೆ ತೀರ್ಪು ಪ್ರಕಟಿಸಿದೆ. ಕುಂಚಿಟಿಗರು ಇದನ್ನು ಮನಗಾಣುವ ಬದಲು ಜಾತಿ ಬದಲಾವಣೆ ಮಾಡಿದರೆ ಸಿಕ್ಕಂತಹ ಸರ್ಕಾರಿ ನೌಕರಿ, ಗೆದ್ದ ರಾಜಕೀಯ ಸ್ಥಾನಮಾನಗಳು, ಜಾತಿ ಸಿಂಧುತ್ವ ಪ್ರಮಾಣಪತ್ರ ಸಿಗದೆ ಕೈ ತಪ್ಪಿ ಹೋಗಿ ಕ್ರಿಮಿನಲ್ ಮೊಕ್ಕದ್ದಮೆ ಎದುರಿಸಬೇಕಾಗುತ್ತದೆ ಎಂಬುದಾಗಿ ಎಚ್ಚರಿಸಿದರು.
ಉಪಾಧ್ಯಕ್ಷ ಮಲ್ಲಪ್ಪನಹಳ್ಳಿ ಜೋಗೇಶ್ ಮಾತನಾಡಿ, ಒಕ್ಕಲಿಗ ನೌಕರರ ಸಂಘದ ಪದಾಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಿ ಕಾನೂನಾತ್ಮಕ ಹೋರಾಟ ಮಾಡಬೇಕು ಎಂದು ಹೇಳಿದಾಗ ಸಭೆಯಲ್ಲಿದ್ದವರು ಒಪ್ಪಿಗೆ ನೀಡಿದರು.
ಈ ಸಭೆಯಲ್ಲಿ ಕುಂಚಿಟಿಗರ ಸಂಘದ ಗೌರವಾಧ್ಯಕ್ಷ ಗಡಾರಿ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ವಿ.ಕುಬೇರಪ್ಪ, ನಿರ್ದೇಶಕರಾದ ಲಕ್ಷ್ಮಣ್ ಗೌಡ, ದಿಂಡಾವರ ಚಂದ್ರಗಿರಿ, ಕಾತ್ರಿಕೇನಹಳ್ಳಿ ಮಂಜುನಾಥ್, ಆಪ್ಟಿಕಲ್ಸ್ ರಾಜೇಶ್, ದೇವರಾಜ್ ಮಾಸ್ಟರ್, ಕೆ.ಕೆ.ಹಟ್ಟಿ ಜಯಪ್ರಕಾಶ್, ಮಾಸ್ತಿಕಟ್ಟೆ ಚಂದ್ರಶೇಖರ್, ಹುಚ್ಚವ್ವನಹಳ್ಳಿ ಅವಿನಾಶ್, ಪೆಪ್ಸಿಹನುಮಂತರಾಯ, ಕಸವನಹಳ್ಳಿ ಶ್ರೀನಾಥ್, ಚಿಲ್ಲಹಳ್ಳಿ ವೀರಣ್ಣಗೌಡ, ಸಲವಮ್ಮನಹಳ್ಳಿ ಭಾರತಿ, ರಂಗನಾಥಪುರ ಮೋಹನ್ ಗೌಡ, ಕುರುಬರಹಳ್ಳಿ ಮಹೇಶ್, ತಿಮ್ಮಣ್ಣಭ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading