September 14, 2025
1756824093709.jpg




ಚಿತ್ರದುರ್ಗ ಸೆ. 02
ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ವಿಸರ್ಜನೆ ಸೆ. 13 ರಂದು ನೆರವೇರಲಿದ್ದು, ಸುಮಾರು 4 ಲಕ್ಷಕೂ ಹೆಚ್ಚಿನ ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ ಯಾವುದೇ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಜೊತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತುರ್ತು ಸ್ಪಂದನಾ ತಂಡವನ್ನು ನೇಮಿಸಿ, ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೆ. 13 ರಂದು ನಗರಕ್ಕೆ ಸುಮಾರು 4 ಲಕ್ಷಕ್ಕೂ ಹೆಚ್ಚಿನ ಜನ ಸೇರಲಿದ್ದು, ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯ ಸುಗಮ ಹಾಗೂ ವ್ಯವಸ್ಥಿತ ರೀತಿಯಲ್ಲಿ ಜರುಗುವಂತಾಗಬೇಕು, ಯಾವುದೇ ಅವಘಡಗಳಿಗೆ ಅವಕಾಶವಾಗದಂತೆ ಸಂಬಂಧಿಸಿದ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಜೊತೆಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಅಗ್ನಿಶಾಮಕ, ಆರೋಗ್ಯ, ಬೆಸ್ಕಾಂ, ನಗರಸಭೆ, ಗೃಹರಕ್ಷಕದಳ ಮತ್ತಿತರ ಅಗತ್ಯ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತುರ್ತು ಸ್ಪಂದನಾ ತಂಡವನ್ನು ನೇಮಿಸಲಾಗುವುದು. ಇವರ ಜೊತೆಗೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ವಿವಿಧ ತಾಲ್ಲೂಕುಗಳ ತಹಸಿಲ್ದಾರರನ್ನು ಕೂಡ ಸಮನ್ವಯಕ್ಕಾಗಿ ನಿಯೋಜಿಸಲಾಗುವುದು. ಯಾವುದೇ ಅವಘಡಗಳು ಸಂಭವಿಸದಂತೆ ಪೂರ್ವ ಮುನ್ನೆಚ್ಚರಿಕಾ ಕ್ರಮಗಳನ್ನು ಈ ತಂಡ ಕೈಗೊಳ್ಳಬೇಕು, ಇದರ ಜೊತೆಗೆ ಒಂದು ವೇಳೆ ಯಾವುದೇ ವಿಪತ್ತಿನ ಪರಿಸ್ಥಿತಿ ಬಂದರೂ, ನಿರ್ವಹಣೆಗೆ ಸಿದ್ಧರಿರುವ ರೀತಿ ಕಾರ್ಯ ಯೋಜನೆ ರೂಪಿಸಿಕೊಳ್ಳಬೇಕು. ಈಗಾಗಲೆ ಜಿಲ್ಲೆಯಲ್ಲಿ ಡಿ.ಜೆ. ಸೌಂಡ್ ಸಿಸ್ಟಂ ಅನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ನಿಗದಿತ ಡೆಸಿಬಲ್ ಸಾಮಥ್ರ್ಯಕ್ಕಿಂತ ಮೀರಿದ ಧ್ವನಿ ವರ್ಧಕಗಳ ಬಳಕೆಗೆ ಅವಕಾಶವಿಲ್ಲ, ಈ ಬಗ್ಗೆ ಪೊಲೀಸ್ ಇಲಾಖೆಯವರು ಎಚ್ಚರಿಕೆ ವಹಿಸಿ, ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು. ಮೆರವಣಿಗೆ ಸಾಗುವ ದಾರಿಯಲ್ಲಿ ಅಂದು ಸಂಪೂರ್ಣವಾಗಿ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗುವುದು, ಈ ನಿಟ್ಟಿನಲ್ಲಿ ಒಂದು ದಿನ ಮೊದಲೇ ಎಲ್ಲೆಡೆ ಬ್ಯಾರಿಕೇಡ್‍ಗಳನ್ನು ನಿರ್ಮಿಸಿಕೊಳ್ಳಬೇಕು. ಪ್ರವೇಶ ಹಾಗೂ ನಿರ್ಗಮನ ಪ್ರದೇಶಗಳನ್ನು ಗುರುತಿಸಿಕೊಳ್ಳಬೇಕು. ಮಾರ್ಗದಲ್ಲಿ ಸೂಕ್ತ ಸ್ಥಳಗಳಲ್ಲಿ ವಾಚಿಂಗ್ ಟವರ್‍ಗಳ ನಿರ್ಮಾಣ, ಅಗತ್ಯವಿರುವ ಕಡೆಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಕೆ ಪೂರ್ಣಗೊಳ್ಳಬೇಕು. ಮೆರವಣಿಗೆ ಮಾರ್ಗದಲ್ಲಿನ ಮಾಧ್ಯಮಿಕ ಶಾಲಾ ಮೈದಾನ, ಪ್ರವಾಸಿ ಮಂದಿರ, ತ.ರಾಸು ರಂಗಮಂದಿರ, ಮತ್ತಿತರ ಸರ್ಕಾರಿ ಕಟ್ಟಡಗಳನ್ನು ಗುರುತಿಸಿ, ವಶಕ್ಕೆ ಪಡೆದುಕೊಂಡಿರಬೇಕು. ಸೂಕ್ಷ್ಮ ಪ್ರದೇಶಗಳನ್ನು ಮೊದಲೇ ಗುರುತಿಸಿಕೊಂಡು, ಇಂತಹ ಸ್ಥಳಗಳಲ್ಲಿ ಪರಿಸ್ಥಿತಿ ನಿರ್ವಹಣೆಗೆ ಯೋಜನೆ ರೂಪಿಸಿಕೊಳ್ಳಬೇಕು. ಅಂದು ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ವಿದ್ಯುತ್ ಸಂಪರ್ಕ ವ್ಯವಸ್ಥೆ ಪರಿಶೀಲಿಸಿಕೊಂಡು, ರಾತ್ರಿ ವೇಳೆ ಅಗತ್ಯ ಇರುವ ಕಡೆಗಳಲ್ಲಿ ಜನರೇಟರ್‍ಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಮೆರವಣಿಗೆ ಮಾರ್ಗದಲ್ಲಿನ ಎರಡೂ ಬದಿಯಲ್ಲಿ ಖಾಸಗಿ ಕಟ್ಟಡಗಳ ಮೇಲೆ ಆಯಾ ಕಟ್ಟಡ ಮಾಲೀಕರು, ಕುಟುಂಬದವರು ಮಾತ್ರ ಇರಬೇಕೆ ಹೊರತು, ಇತರೆ ಜನರು ಕಟ್ಟಡಗಳ ಮೇಲೆ ಇರುವಂತಿಲ್ಲ. ಒಂದು ವೇಳೆ ಯಾವುದೇ ಅವಘಡ ಸಂಭವಿಸಿದಲ್ಲಿ ಆಯಾ ಕಟ್ಟಡಗಳ ಮಾಲೀಕರನ್ನೇ ಹೊಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅವಘಡಗಳು ಸಂಭವಿಸದಂತೆ ಬಹಳ ಎಚ್ಚರಿಕೆಯಿಂದ, ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ಅವರು ಮಾತನಾಡಿ, ವಿಸರ್ಜನಾ ಮೆರವಣಿಗೆಯಲ್ಲಿ 4 ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಹೆಚ್ಚಿನ ಜನರ ದಟ್ಟಣೆಯಿಂದಾಗಿ ಕಾಲ್ತುಳಿತ, ವೈದ್ಯಕೀಯ ತುರ್ತು ಪರಿಸ್ಥಿತಿ, ವಿದ್ಯುತ್ ಅವಘಡ ಮತ್ತು ಅಗ್ನಿ ಅವಘಡಗಳು ಸೇರಿದಂತೆ ಅಹಿತಕರ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ತುರ್ತು ಸೇವೆಯ ಇಲಾಖೆಗಳು ಹಾಗೂ, ಸ್ವಯಂ ಸೇವಕರು, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ತಂಡಗಳ ರಚನೆ ಮಾಡಿ, ಈಗಾಗಲೇ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಹಿಂದೂ ಮಹಾಗಣಪತಿ ಮೆರವಣಿಗೆ ಸಾಗುವ ದಾರಿಯಲ್ಲಿನ ಪ್ರವಾಸಿ ಮಂದಿರ, ಎಸ್‍ಬಿಐ ಬ್ಯಾಂಕ್ ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತ ಸೇರಿದಂತೆ ಅಗತ್ಯ ಇರುವ ಕಡೆಗಳಲ್ಲಿ ತಾತ್ಕಾಲಿಕ ವೈದ್ಯಕೀಯ ಸೇವೆ ಕೇಂದ್ರ ತೆರೆಯಬೇಕು, ಇಲ್ಲಿ ತುರ್ತು ನಿರ್ವಹಣೆ ಹಾಗೂ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗುವ ರೀತಿ ಆ್ಯಂಬುಲೆನ್ಸ್ ಸಹಿತ ವೈದ್ಯರು ಹಾಗೂ ಶುಶ್ರೂಷಕರನ್ನು ನಿಯೋಜಿಸಬೇಕು, ಸಾಕಷ್ಟು ಅಗತ್ಯ ಔಷಧಿ ಲಭ್ಯವಿರಬೇಕು. ಬ್ಯಾರಿಕೇಡ್ ಹಾಗೂ ವಾಚ್ ಟವರ್‍ಗಳನ್ನು ಲೋಕೋಪಯೋಗಿ ಇಲಾಖೆ ಪರಿಶೀಲಿಸಿ ದೃಢೀಕರಣ ನೀಡಬೇಕು. ನಗರಸಭೆ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕೈಗೊಳ್ಳಬೇಕು. ಮೆರವಣಿಗೆ ಮಾರ್ಗದಲ್ಲಿ ಯಾವುದೇ ಕಟ್ಟಡ ಕಾಮಗಾರಿ ನಡೆಯುತ್ತಿದ್ದಲ್ಲಿ, ತಾತ್ಕಾಲಿವಾಗಿ ಅಲ್ಲಿನ ಕಲ್ಲು ಮತ್ತು ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಚಂದ್ರವಳ್ಳಿ, ವಿಸರ್ಜನಾ ಸ್ಥಳಗಳಲ್ಲಿನ ರಸ್ತೆ ಅಕ್ಕಪಕ್ಕದ ಮರಗಳು ರಸ್ತೆಗೆ ಬಾಗುವಂತಿದ್ದಲ್ಲಿ, ರೆಂಬೆ ಕೊಂಬೆಗಳನ್ನು ತೆರವುಗೊಳಿಸಬೇಕು. ಕಡ್ಡಾಯವಾಗಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ, ಅದರ ಅನುಷ್ಠಾನ ಸಮರ್ಪಕವಾಗಿ ಆಗಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್, ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading