March 2, 2026
FB_IMG_1772460185037.jpg

ಚಿತ್ರದುರ್ಗ ಮಾ.02:
ಕೆ.ಎಂ.ಇ.ಆರ್.ಸಿ (ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿಯಮಿತ) ಹಾಗೂ ಸಿ.ಎಂ.ಐ.ಡಿ.ಪಿ (ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ) ಅಡಿ ಆಡಳಿತಾತ್ಮಕ ಮಂಜೂರಾತಿ ನೀಡಲಾದ ಕಾಮಗಾರಿಗಳಿಗೆ ಕೂಡಲೇ ತಾಂತ್ರಿಕ ಅನುಮೋದನೆ ಪಡೆದು, ಟೆಂಡರ್ ಕರೆದು ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಮುಂದುವರಿದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಡಳಿತಾತ್ಮಕ ಅನುಮೊದನೆ ಪಡೆದ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ ವಿಳಂಬವಾಗುತ್ತಿರುವುದಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಡಿ.ಸುಧಾಕರ್, ಬೆಂಗಳೂರಿನ ಮುಖ್ಯ ಇಂಜಿನಿಯರ್ ಅವರಿಗೆ ಸಭೆಯ ಸಂದರ್ಭದಲ್ಲಿಯೇ ಕರೆ ಮಾಡಿ, 6 ತಿಂಗಳಾದರೂ ತಾಂತ್ರಿಕ ಅನುಮೋದನೆ ನೀಡದೆ, ಕಡತಗಳನ್ನು ಇಟ್ಟುಕೊಂಡರೆ, ಅಭಿವೃದ್ಧಿ ಕಾಮಗಾರಿಗಳು ನಡೆಯುವುದು ಹೇಗೆ ಎಂದು ಪ್ರಶ್ನಿಸಿದರು. ಚಿತ್ರದುರ್ಗ ಜಿಲ್ಲೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಿ, ಕೂಡಲೇ ತಾಂತ್ರಿಕ ಅನುಮೋದನೆ ನೀಡುವಂತೆ ನಿರ್ದೇಶನ ನೀಡಿದರು.

ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಾಮಗಾರಿಗಳಲ್ಲಿ ಯೋಜನೆ ರೂಪಿಸಲಾಗಿದೆ. ಜಿಲ್ಲಾಧಿಕಾರಿಗಳು ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ ಶೀಘ್ರವಾಗಿ ಟೆಂಡರ್ ಕರೆಯಲು ಮುಂದಾಗಬೇಕು. ಕೂಡಲೇ ಕೆಲಸ ಆರಂಭಿಸಿ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಚಿವ ಡಿ.ಸುಧಾಕರ್ ಆದೇಶಿಸಿದರು.
ಬಿರು ಬೇಸಿಗೆ, ಸಮರ್ಪಕ ಕುಡಿಯುವ ನೀರು ಸರಬರಾಜಿಗೆ ತಾಕೀತು:


ಈ ಬಾರಿ ಪ್ರಖರ ಬೇಸಿಗೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬಿರು ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗದಂತೆ ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಸಚಿವ ಡಿ.ಸುಧಾಕರ್ ತಾಕೀತು ಮಾಡಿದರು.
15ನೇ ಹಣಕಾಸು ಯೋಜನೆಯಡಿ ಹಂಚಿಕೆಯಾದ ಅನುದಾನ ಗ್ರಾಮ ಪಂಚಾಯಿತಿಗಳಿಗೆ ಬಂದಿಲ್ಲ. ಗ್ರಾಮ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನ ಕೊರತೆ ಉಂಟಾಗದಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು. ಚಿತ್ರದುರ್ಗ ಜಿಲ್ಲೆ ಸದಾಕಾಲ ಬರಗಾಲಕ್ಕೆ ತುತ್ತಾಗುತ್ತದೆ. ಇದರ ಹಿನ್ನಲೆಯಲ್ಲಿ ವಿಪತ್ತು ನಿರ್ವಹಣೆ ನಿಧಿಯನ್ನು ಕುಡಿಯುವ ನೀರಿನ ಕಾಮಗಾರಿಗಳಗೆ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಡಿ.ಸುಧಾಕರ್ ಸೂಚಿಸಿದರು.

ಜಿ.ಪಂ. ಡಾ.ಆಕಾಶ್ ಸಭೆಯಲ್ಲಿ ಮಾತನಾಡಿ, ಈ ಬಾರಿ ಮಳೆ ಕೊರತೆಯ ಮುನ್ಸೂಚನೆ ಇರುವುದರಿಂದ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ವೈಜ್ಞಾನಿಕವಾಗಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಕಳೆದ ಮೂರು ವರ್ಷಗಳ ದತ್ತಾಂಶಗಳನ್ನು ವಿಶ್ಲೇಷಿಸಿ ಮುಂದಿನ ಎರಡು ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮ ಪಂಚಾಯತಿವಾರು ಹಳ್ಳಿಗಳ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.
ಜಿಲ್ಲೆಯ 72 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 233 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಈ ಹಳ್ಳಿಗಳಲ್ಲಿ ಮುಂಬರುವ ದಿನಗಳಲ್ಲಿ ಅಂದಾಜು 3,375 ಟ್ಯಾಂಕರ್‍ಗಳ ಮೂಲಕ ನೀರು ಪೂರೈಸುವ ಅಗತ್ಯ ಬರಬಹುದು. ನೀರಿನ ತೀವ್ರ ಅಭಾವವಿರುವ ಕಡೆಗಳಲ್ಲಿ ಹೊಸದಾಗಿ 241 ಬೋರ್‍ವೆಲ್‍ಗಳನ್ನು ಕೊರೆಯಿಸಬೇಕಾಗುತ್ತದೆ ಎಂಬುದಾಗಿ ವರದಿ ಸಲ್ಲಿಕೆಯಾಗಿದೆ. ತುರ್ತು ಸಂದರ್ಭಗಳಲ್ಲಿ ಸುಮಾರು 23 ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಆಧಾರದ ಮೇಲೆ ಬಳಸಿಕೊಳ್ಳಲು ಗುರುತಿಸಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಪರಿಸ್ಥಿತಿ ಬಿಗಡಾಯಿಸದಂತೆ ಈಗಿನಿಂದಲೇ ಟ್ಯಾಂಕರ್ ಮತ್ತು ಬೋರ್‍ವೆಲ್ ಕಾಮಗಾರಿಗಳ ಮೇಲ್ವಿಚಾರಣೆ ನಡೆಸುವಂತೆ ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಗ್ರಾಮ ಪಂಚಾಯತಿಯ ಆಡಳಿತಾಧಿಕಾರಿಗಳಿಗೆ ವಾರದಲ್ಲಿ ಕನಿಷ್ಟ 2 ಬಾರಿಯಾದಗೂ ಗ್ರಾ.ಪಂ. ಕಚೇರಿಗಳಿಗೆ ಭೇಟಿ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಆರ್‍ಓ ಘಟಕಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ:
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು (ಆರ್.ಓ.ಘಟಕ) ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡುವಂತೆ ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದುರಸ್ತಿಯಲ್ಲಿಯಲ್ಲಿರುವ ಆರ್.ಓ. ಘಟಕಗಳನ್ನೂ ರಿಪೇರಿ ಮಾಡಿಸಿ, ಶೇ.100ರಷ್ಟು ಆರ್.ಓ. ಘಟಕಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನಿಂದ ಸರಬರಾಜು ಇರುವ ಕಾರಣಕ್ಕೆ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲ್ಲೂಕಿನ ಒಂದೂ ಹಳ್ಳಿಯನ್ನು ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಹಳ್ಳಿಗಳ ಪಟ್ಟಿಯಲ್ಲಿ ಗುರುತಿಸಿಲ್ಲ. ಅಧಿಕಾರಿಗಳು ಈ ಭಾಗದಲ್ಲಿನ ಎಲ್ಲಾ ಓವರ್ ಹೆಡ್ ಟ್ಯಾಂಕ್‍ಗಳು ಹಾಗೂ ನೀರು ಸರಬರಾಜಿನ ಜಾಲಗಳನ್ನು ಪೂರ್ಣಗೊಳಿಸಿ, ಯಾವುದೇ ಸಮಸ್ಯೆಗಳು ಬರದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಈ ಸಂದರ್ಭದಲ್ಲಿ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಅನ್ನೇಹಾಳ್ ಜಂಪಯ್ಯನಹಟ್ಟಿ ಗ್ರಾಮದಲ್ಲಿ ಆರ್.ಓ. ಘಟಕ ಕಾರ್ಯಾರಂಭ ಹಾಗೂ ಹಸ್ತಾಂತರ ಮಾಡದೇ ಆರ್.ಓ. ಘಟಕ ರಿಪೇರಿಗೆ ಬಂದಿದ್ದು, ಈ ಕೂಡಲೇ ಕ್ರಮವಹಿಸಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗಾಗಿ ಸರ್ಕಾರದಿಂದ ರೂ.46 ಲಕ್ಷ ಅನುದಾನ ಬಂದಿದ್ದು, ತಾಲ್ಲೂಕುವಾರು ಎಲ್ಲ ಆರ್.ಓ.ಘಟಕಗಳನ್ನು ಸರಿಪಡಿಸಿ, ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ರಾಜ್ಯಮಟ್ಟದ ಟಾಪ್ 10 ಶ್ರೇಣಿಯತ್ತ ಇರಲಿ ಚಿತ್ತ:
ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಮೊದಲ ಹತ್ತು ಸ್ಥಾನಗಳ ಪಟ್ಟಿಯಲ್ಲಿ ಜಿಲ್ಲೆಯನ್ನು ತರುವ ಗುರಿ ಹೊಂದುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಮಾತನಾಡಿ, ಕಳೆದ ವರ್ಷದ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯಮಟ್ಟದಲ್ಲಿ 23ನೇ ಸ್ಥಾನ ಪಡೆದಿತ್ತು. ಆದರೆ ಈ ವರ್ಷ ಶಿಕ್ಷಣ ಇಲಾಖೆಯು ಸತತ ಪ್ರಯತ್ತದಿಂದಾಗಿ ಜಿಲ್ಲೆಯು ಶೈಕ್ಷಣಿಕವಾಗಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ಎರಡನೇ ಪೂರ್ವಭಾವಿ ಪರೀಕ್ಷೆಯ ಫಲಿತಾಂಶದ ಅನ್ವಯ ಜಿಲ್ಲೆಯು ಈಗಾಗಲೇ ರಾಜ್ಯಮಟ್ಟದಲ್ಲಿ 12ನೇ ಶ್ರೇಣಿಗೆ ಏರಿಕೆ ಕಂಡಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಮಾರ್ಚ್ 18 ರಿಂದ ಪ್ರಾರಂಭವಾಗಲಿದ್ದು, ಜಿಲ್ಲೆಯಲ್ಲಿ ಸುಗಮವಾಗಿ ಪರೀಕ್ಷೆ ನಡೆಸಲು ಒಟ್ಟು 84 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಪರೀಕ್ಷಾ ಅಕ್ರಮಗಳಿಗೆ ಅವಕಾಶ ನೀಡದಂತೆ ಎಲ್ಲ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಟ್ಟುನಿಟ್ಟಿನ ಕಣ್ಗಾವಲು ಇರಲಿದೆ. ಮಂಡಳಿಯ ನಿಯಮಗಳ ಪ್ರಕಾರ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ತಾಯಿ ಮಕ್ಕಳ ಆಸ್ಪತ್ರೆಗಳಿಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ :

ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಎಲ್ಲೆಲ್ಲಿ ಹೆಚ್ಚು ಹೆರಿಗೆ ಪ್ರಕರಣಗಳನ್ನು ನಿರ್ವಹಿಸಲಾಗುತ್ತಿದೆಯೋ, ಅಂತಹ ಆಸ್ಪತ್ರೆಗಳಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಾತಿ ಪಡೆಯಲು, ಹಾಗೂ ವೈದ್ಯಕೀಯ ಕಾಲೇಜಿಗೆ ಅಗತ್ಯವಿರುವ ಸೌಲಭ್ಯಗಳಿಗೆ ಸಂಬಂಧಿಸಿದಂತೆಯೂ ಅಗತ್ಯವಿರುವ ಪ್ರಸ್ತಾವನೆ ಸಲ್ಲಿಸಿದಲ್ಲಿ, ಕೆಎಂಇಆರ್‍ಸಿ ಯೋಜನೆಯಡಿ ಮಂಜೂರಾತಿಗೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಂತ್ರಾಂಶದ ಮಿತಿಯಿಂದ ಮನೆ ಹಂಚಿಕೆಗೆ ಅಡ್ಡಿ:

ಮೀಸಲಾತಿ ಮತ್ತು ತಂತ್ರಾಂಶದ ಗೊಂದಲ ಗ್ರಾಮೀಣ ವಸತಿ ಯೋಜನೆಗಳಲ್ಲಿ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ನಿಗದಿಪಡಿಸಲಾದ ಶೇ.24.1 ಮೀಸಲಾತಿ ಹಂಚಿಕೆ ಪ್ರಕ್ರಿಯೆಯಲ್ಲಿ ಸವಾಲಾಗಿ ಪರಿಣಮಿಸಿದ್ದು, ಕೆಲವು ಗ್ರಾಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಸಮುದಾಯದ ಜನಸಂಖ್ಯೆ ಹೆಚ್ಚಿದ್ದರೂ ಆನ್‍ಲೈನ್ ತಂತ್ರಾಂಶವು ಶೇ.24.1 ಕ್ಕಿಂತ ಹೆಚ್ಚಿನ ಮನೆಗಳನ್ನು ಅಪ್‍ಲೋಡ್ ಮಾಡಲು ಅವಕಾಶ ನೀಡುತ್ತಿಲ್ಲ. ಈ ತಾಂತ್ರಿಕ ಮಿತಿಯಿಂದಾಗಿ ಅರ್ಹರಿದ್ದರೂ ಅನೇಕರಿಗೆ ಮನೆಗಳು ಮಂಜೂರಾಗುತ್ತಿಲ್ಲ. ಈ ಬಗ್ಗೆ ವಸತಿ ಸಚಿವರಿಗೆ ಪತ್ರ ಬರೆದು ತಂತ್ರಾಂಶದಲ್ಲಿ ಅಗತ್ಯ ಬದಲಾವಣೆ ತರಲು ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ನಗರ ವಸತಿ ಯೋಜನೆಯಡಿಯಲ್ಲಿ 2021-22ನೇ ಸಾಲಿನಲ್ಲಿ ಒಟ್ಟು 409 ಮನೆಗಳಿಗೆ ಅನುಮೋದನೆ ಸಿಕ್ಕಿದೆ. ಈ ಪೈಕಿ 198 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಸುಮಾರು 107 ಮನೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ತಾಂತ್ರಿಕ ಕಾರಣದಿಂದಾಗಿ ಇನ್ನೂ 18 ಮನೆಗಳ ಹಂಚಿಕೆ ಬಾಕಿ ಇದೆ ಎಂದು ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಸಭೆಗೆ ಮಾಹಿತಿ ನೀಡಿದರು.
ಮಾರ್ಚ್ 30ರ ಒಳಗೆ ಕ್ರಿಯಾಯೋಜನೆ ರೂಪಿಸಲು ನಿರ್ದೇಶನ:

ಕೆ.ಎಂ.ಇ.ಆರ್.ಸಿ ಅನುದಾನದಲ್ಲಿ ಅಂಗನವಾಡಿ, ವಿದ್ಯಾರ್ಥಿ ನಿಲಯ, ಆರೋಗ್ಯ ಕೇಂದ್ರಗಳು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಪ್ರಧಾನ್ಯತೆ ನೀಡಿ, ಮಾರ್ಚ್ 30ರ ಓಳಗಾಗಿ ಕ್ರಿಯಾಯೋಜನೆ ರೂಪಿಸುವಂತೆ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಡಿ.ಎಂ.ಎಫ್ (ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ) ಅಡಿ ಅನುದಾನ ಒದಗಿಸಲು ಸಾಧ್ಯವಿಲ್ಲ. ಸದ್ಯ ಹಳೆ ಬೆಂಗಳೂರು ರಸ್ತೆಯಲ್ಲಿ ನಿರ್ಮಿಸಿರುವ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವನ್ನು, ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲು ಸರ್ಕಾರದ ಮಟ್ಟದಲ್ಲಿ ತಿರ್ಮಾನವಾಗಿದ್ದು, ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಹೊಸ ಡಿಸಿ ಆಫೀಸ್ ಕಟ್ಟಡ ನಿರ್ಮಿಸಲು ಯೋಜಿಸಿಸಲಾಗಿದೆ. ಈಗಾಗಲೆ ತೋಟಗಾರಿಕೆ ಇಲಾಖೆ ಸಚಿವರು ಸಮ್ಮತಿ ಸೂಚಿಸಿದ್ದು, ಈ ಕುರಿತು ಸರ್ಕಾರಿ ಆದೇಶ ಬಂದ ಕೂಡಲೇ ಕಟ್ಟಡವನ್ನು ಹಸ್ತಾಂತರಿಸಲಾಗುವುದು. ಜಿಲ್ಲೆಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸಚಿವ ಡಿ.ಸುಧಾಕರ್ ಈ ಸಂದರ್ಭದಲ್ಲಿ ಸೂಚಿಸಿದರು.
ಕೃಷಿ ಚಟುವಟಿಕೆಗಳಿಗೆ ಕೆರೆ ಹೂಳು ಮಣ್ಣು ಬಳಸಲು ಅಡ್ಡಿ ಸಲ್ಲದು :

ಕೆರೆಗಳಿಗೆ ನೀರು ತುಂಬುವ ಮುನ್ನ ಕೆರೆ ಹೂಳು ಎತ್ತಿದರೆ, ನೀರು ಸಂಗ್ರಹದ ಸಾಮಥ್ರ್ಯ ಹೆಚ್ಚುತ್ತದೆ. ಈ ಹಿನ್ನಲೆಯಲ್ಲಿ ಕೆರೆಗಳ ಹೂಳು ಮಣ್ಣನ್ನು ರೈತರು ಬಳಸಲು ಅನುಮತಿ ನೀಡಲಾಗಿದೆ. ಆದರೆ ವಿನಾಕರಣ ರೈತರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಶಾಸಕರುಗಳಾದ ಡಾ.ಎಂ. ಚಂದ್ರಪ್ಪ ಹಾಗೂ ಬಿ.ಜಿ. ಗೋವಿಂದಪ್ಪ ಸಭೆಯಲ್ಲಿ ಆಕ್ಷೇಪಸಿದರು.
ರೈತರು ಕೆರೆ ಹೂಳು ಮಣ್ಣನ್ನು ಜಮೀನುಗಳಿಗೆ ಬಳಸಲು ಅಡ್ಡಿ ಪಡಿಸಬಾರದು. ಪ್ರಕರಣ ದಾಖಲಿಸುವುದು, ದಂಡ ವಸೂಲಿಯಂತಹ ಕ್ರಮಗಳನ್ನು ಕೈಗೊಳ್ಳಬಾರದು. ಈ ಕುರಿತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದರು.
ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳ ಅಭಿವೃದ್ಧಿಗಾಗಿ ರೈತರು ಕೆರೆಯ ಹೂಳು ಅಥವಾ ಮಣ್ಣನ್ನು ಬಳಸಿಕೊಳ್ಳಲು ಯಾವುದೇ ಅಡ್ಡಿಯಿಲ್ಲ. ಆದರೆ ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಕುರಿತು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
ಅನುಮತಿ ಕೋರುವಾಗ ರೈತರು ತಮ್ಮ ಜಮೀನಿನ ಖಖಿಅ (ಪಹಣಿ) ಮತ್ತು ಕೃಷಿ ಚಟುವಟಿಕೆಯ ಉದ್ದೇಶವನ್ನು ಸ್ಪಷ್ಟಪಡಿಸಬೇಕು. ಕೃಷಿ ಉದ್ದೇಶಕ್ಕಾಗಿ ಕೇವಲ ಟ್ರಾಕ್ಟರ್‍ಗಳ ಮೂಲಕ ಮಾತ್ರ ಮಣ್ಣು ಸಾಗಿಸಲು ಅವಕಾಶವಿದೆ. ವಾಣಿಜ್ಯ ಚಟುವಟಿಕೆಗೆ ಕೆರೆ ಮಣ್ಣು ಸಾಗಣೆಗೆ ಅವಕಾಶವಿಲ್ಲ. ಮಣ್ಣು ತೆಗೆಯುವಾಗ ಕೆರೆಯ ಒಳಭಾಗದಲ್ಲಿ ಒಂದು ಮೀಟರ್‍ಗಿಂತ ಹೆಚ್ಚು ಆಳಕ್ಕೆ ಗುಂಡಿ ತೋಡುವಂತಿಲ್ಲ. ಕೆರೆಗಳ ಸಂರಕ್ಷಣೆ ದೃಷ್ಟಿಯಿಂದ ಇದು ಕೆರೆಯ ಮೂಲ ವಿನ್ಯಾಸಕ್ಕೆ ಧಕ್ಕೆ ತರದಂತೆ ಇರಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸಭೆಯಲ್ಲಿ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading