ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ:
ಮುಂಬರುವ ಅಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರನ್ನು ನೇರವಾಗಿ ಭೇಟಿ ಮಾಡಿ, ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಬೇಕು ಎಂದು ಪಕ್ಷದ ಸ್ಪರ್ಧಾಕಾಂಕ್ಷಿ ವಸಂತಕುಮಾರ ಕಾರ್ಯಕರ್ತರಿಗೆ ಕರೆ ನೀಡಿದರು.
ಪಟ್ಟಣದಲ್ಲಿ ಸೋಮವಾರ ಪದವೀಧರರು ಆಯೋಜಿಸಿದ್ದ ಸಭೆಯಲ್ಲಿ 2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಕ್ಷೇತ್ರದಲ್ಲಿರುವ ಪದವೀಧರ ಮತದಾರರನ್ನು ಮನೆಮನೆಗೆ ಭೇಟಿ ಮಾಡಿ ಪಕ್ಷದ ಸಂಘಟನೆ ಬಲಪಡಿಸಬೇಕು. ಅಲ್ಲದೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರದೇ ಇರುವ ಅರ್ಹ ಪದವೀಧರರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರಿಸುವ ಕೆಲಸವನ್ನು ಕಾರ್ಯಕರ್ತರು ಪ್ರಾಮಾಣಿಕವಾಗಿ ಮಾಡಬೇಕು. ಇದರಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ಹೆಬ್ಬಳ್ಳಿ ಮಲ್ಲಿಕಾರ್ಜುನ್, ನರೇಂದ್ರ, ಶಿವುಮಠ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹನುಮಂತಪ್ಪ, ಪುರಸಭಾ ಸದಸ್ಯ ನಾಗರಾಜ, ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಅಧ್ಯಕ್ಷ ಮನುಕುಮಾರ ಮಾತನಾಡಿ, ಮುಂಬರುವ ದಿನಗಳಲ್ಲಿ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಗಳನ್ನು ಆಯೋಜಿಸಬೇಕು. ತಾಲೂಕಿನ ಹಿರಿಯ ಮುಖಂಡರು ಸ್ವಾರ್ಥ ಬಿಟ್ಟು ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಕೀಲರಾದ ಡಿ.ಟಿ. ಲಿಂಗರಾಜು, ಬಸವಲಿಂಗಪ್ಪ, ಕೀರ್ತಿಕುಮಾರ, ಅಯ್ಯಪ್ಪಸ್ವಾಮಿ, ಯುವ ಮೋರ್ಚಾದ ಅಧ್ಯಕ್ಷ ಕಲ್ಲೇಶ, ಸಂತೋಷ, ಸಿಂದು, ಅಶೋಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.