ವರದಿ: ಕೆ.ಟಿ.ಮೋಹನ್ ಕುಮಾರ್
ಮೈಸೂರು: ಕನ್ನಡ ಭಾಷೆಯನ್ನು ಉಳಿಸಬೇಕು ಹಾಗೂ ಬೆಳೆಸಬೇಕು ಎಂದು ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಕೆ.ಮಧುಚಂದ್ರ ಹೇಳಿದರು.
ಅವರು ಸಾಲಿಗ್ರಾಮ ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ಸಾಲಿಗ್ರಾಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಲಿಗ್ರಾಮ ಗ್ರಾಮ ಪಂಚಾಯಿತಿ ಗ್ರಂಥಾಲಯದ ಸಹಯೋಗದಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ವರೂ ಕನ್ನಡ ಭಾಷೆಯನ್ನು ಬಳಸೋಣ, ಬೆಳೆಸೋಣ, ಇತರ ಭಾಷೆಗಳ ವ್ಯಾಮೋಹ ಬಿಡೋಣ ಕನ್ನಡ ಭಾಷೆಯನ್ನು ಬಳಸೋಣ ಎಂದರು.
ನಾವು ಏನನ್ನು ಉಚ್ಚಾರಣೆ ಮಾಡುತ್ತೇವೋ ಅದನ್ನು ಬರವಣಿಗೆ ಮೂಲಕ ಮಾಡಬಹುದಾದ ಪ್ರಪಂಚದ ಏಕೈಕ ಭಾಷೆ ಕನ್ನಡ ಭಾಷೆಯಾಗಿದೆ ಎಂದರು.
ಕನ್ನಡ ಸಾರಸತ್ವ ಲೋಕಕ್ಕೆ ಕುವೆಂಪು, ಬೇಂದ್ರೆ, ಮಾಸ್ತಿಯವರು ಸೇರಿದಂತೆ ಹಲವು ಹಿರಿಯ ಸಾಹಿತಿಗಳು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
ವರನಟ ಡಾ.ರಾಜಕುಮಾರ್ ಅವರು ಚಲನಚಿತ್ರರಂಗದ ಮೂಲಕ ಕರುನಾಡಿಗೆ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.
ಈ ವರ್ಷ ನವೆಂಬರ್ ತಿಂಗಳಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಹಲವು ಸಾಹಿತ್ಯಾತ್ಮಕ ಚಟುವಟಿಕೆಗಳು, ಸ್ಪರ್ಧೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಾಲಿಗ್ರಾಮ ಪಟ್ಟಣದ ಶ್ರೀ ಯೋಗಾನರಸಿಂಹಸ್ವಾಮಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೇಮ್ ಕುಮಾರ್ ಜೈನ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ಕನ್ನಡ ಭಾಷೆಯನ್ನು ಮಾತನಾಡುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು ಬೇರೆ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡದ ಪರವಾಗಿ ಎ.ಕೆ.ಸುಬ್ಬಯ್ಯ, ಸಾ.ರಾ.ಗೋವಿಂದು ಅವರುಗಳು ಮಾಡಿದ ಸೇವಾಕಾರ್ಯಗಳು ಇಂದಿನ ಯುವ ಜನತೆಗೆ ಮಾದರಿಯಾಗಿದೆ ಎಂದರು. ಪ್ರತಿಯೊಬ್ಬರೂ ಕನ್ನಡ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು ಆ ಮೂಲಕ ಕನ್ನಡ ಭಾಷೆಯ ಉಳಿವಿಗೆ ಶ್ರಮಿಸಬೇಕು ಎಂದರು.
ಪತ್ರಕರ್ತ ಕೆ.ಟಿ.ಮೋಹನ್ ಕುಮಾರ್ ಮಾತನಾಡಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಾಡಿನೆಲ್ಲಡೆ ಅತ್ಯಂತ ಸಡಗರ ಸಂಭ್ರಮದೊಂದಿಗೆ ಅರ್ಥಪೂರ್ಣವಾಗಿ ಕನ್ನಡ ಹಬ್ಬವನ್ನು ಸರ್ವರೂ ಆಚರಣೆ ಮಾಡಬೇಕು ಎಂದರು. ಕೇವಲ ಒಂದು ದಿನ ಅಥವಾ ತಿಂಗಳಿಗೆ ಸೀಮಿತಗೊಳಿಸದೆ ನಿತ್ಯ ಮನೆ – ಮನದಲ್ಲಿ ಕನ್ನಡ ಹಬ್ಬವನ್ನು ಆಚರಿಸಬೇಕು. ಮೊದಲು ನಾವು, ನಮ್ಮ ಭಾಷೆಯನ್ನು ಪ್ರೀತಿಸೋಣ, ಗೌರವಿಸೋಣ, ಮಾತನಾಡೋಣ ಇದರ ಜೊತೆ ಜೊತೆಯಲ್ಲೇ ಬೇರೆಯವರಿಗೂ ಕನ್ನಡ ಭಾಷೆಯನ್ನು ಕಲಿಸೋಣ ಆ ಮೂಲಕ ಎಲ್ಲೆಡೆ ಕನ್ನಡದ ದೀಪವನ್ನು ಹಚ್ಚೋಣ ಎಂದರು. ತಾಲೂಕಿನಲ್ಲಿಯೇ ಪಟ್ಟಣದ ಸಾರ್ವಜನಿಕ ಗ್ರಂಥಾಲಯವು ಸದಾ ಸಕ್ರಿಯವಾಗಿದ್ದುಕೊಂಡು ಕ್ರಿಯಾಶೀಲತೆಯ ಚಟುವಟಿಕೆಗಳನ್ನು ಮಾಡುವುದರ ಮೂಲಕ ಓದುಗರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಕುಸುಮ ಶಿವಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುವರ್ಣ ವೆಂಕಟೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಘು, ಗ್ರಂಥಪಾಲಕಿ ದಿವ್ಯಕುಮಾರಿ, ಯುವ ಉದ್ಯಮಿ ಪ್ರದೀಪ್, ಶಿಕ್ಷಕರಾದ ಶಿವಶಂಕರ, ಲೋಕೇಶ್, ಅಂಬುಜಾಕ್ಷಿ, ಕಂಪ್ಯೂಟರ್ ಶಿಕ್ಷಕ ಶಿವರಾಜ್, ಪತ್ರಕರ್ತರಾದ
ಎಸ್.ಬಿ.ಬಸವರಾಜ್,
ಕೆ.ಸಿ.ಮಹದೇವ್, ಮುಖಂಡ ವೆಂಕಟೇಶ್, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.