December 14, 2025
FB_IMG_1730450879122.jpg


ಚಿತ್ರದುರ್ಗ ನ.01:
ರಾಜ್ಯದಲ್ಲಿ ಕನ್ನಡಿಗರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಉತ್ತಮ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಜಾರಿಗೊಳಿಸಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟçಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದರು.
ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದಡಿ ರಾಜ್ಯದಲ್ಲಿ ದೇಶಿಯ ಹಾಗೂ ವಿದೇಶಿಯ ಕಂಪನಿಗಳಲ್ಲಿ ಉದ್ದಿಮೆ ಸ್ಥಾಪಿಸಬೇಕಾದರೆ, ಕನ್ನಡಿಗರಿಗೆ ಕಡ್ಡಾಯ ಉದ್ಯೋಗದ ಅವಕಾಶಗಳನ್ನು ಕಲ್ಪಿಸಬೇಕು. ಅಂತಹ ಕಂಪನಿಗಳಿಗೆ ಮಾತ್ರ ಸರ್ಕಾರದಿಂದ ಉದ್ದಿಮೆ ಸ್ಥಾಪನೆಗೆ ಅನುಮತಿ ನೀಡಲಾಗುವುದು. ಕನ್ನಡ ಭಾಷೆಯ ಉಳಿವಿಗಾಗಿ ಬೆಳವಣಿಗೆಗಾಗಿ ನಮ್ಮ ಸರ್ಕಾರ ನಾನಾ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಕಾವಲು ಸಮಿತಿ ನೇಮಿಸಿ ಆಡಳಿತ ಭಾಷೆಯಾಗಿ ಕನ್ನಡ ಕಡ್ಡಾಯ ಮಾಡಿದೆ. ಹಾಗೆಯೇ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರಿಗೆ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಟ್ಯಾಗ್ ಧರಿಸುವಂತೆ ಸೂಚಿಸುವುದರ ಮೂಲಕ ಕನ್ನಡಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದರು.
ಕನ್ನಡ ಭಾಷೆ ಬಾರದಿರುವ ಉದ್ಯೋಗಿಗಳಿಗೆ ಕನ್ನಡ ಕಲಿಸಲು “ಕನ್ನಡ ಕಲಿಕಾ ಘಟಕ” ವನ್ನು ಸ್ಥಾಪಿಸಿ ಸರ್ಕಾರವು ಅಗತ್ಯ ಬೋಧಕ ಸಿಬ್ಬಂದಿ ಮತ್ತು ಕಲಿಕಾ ಸಾಮಗ್ರಿಯನ್ನು ಒದಗಿಸಲು ಹಾಗೆಯೇ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಹಾಗಾಗಿ ಅಲ್ಲಿಯೂ ಕನ್ನಡ ಬಳಕೆಯಾಗುತ್ತಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಹಿಂದಿನ ರಾಜಮಹಾರಾಜರಂತೆ ಕನ್ನಡವನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರುಗಳಿಗೆ ನಮ್ಮ ಪರಂಪರೆ, ಸಂಸ್ಕೃತಿ, ಇತಿಹಾಸ ತಲುಪಿಸುವ ಕೆಲಸ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಕನ್ನಡ ಬೆಳೆಸಲು ಸರ್ಕಾರಕ್ಕೆ ಮಾತ್ರ ಬಿಡದೆ ಜನರೂ ಕೈ ಜೋಡಿಸಬೇಕು ಎಂದರು.
ಕನ್ನಡಕ್ಕೆ ಜಿಲ್ಲೆಯ ಕೊಡುಗೆ ಅಪಾರ: ಮೊಟ್ಟ ಮೊದಲು ಕನ್ನಡ ಸಾಮಾಜ್ರö್ಯದ ಸ್ಥಾಪನೆಗೆ ಅಡಿಪಾಯ ಹಾಕಿದ ನೆಲ ಚಿತ್ರದುರ್ಗ. ಕದಂಬರ ಮಯೂರ ವರ್ಮ ಬನವಾಸಿ ಪ್ರದೇಶದಿಂದ ಉನ್ನತ ವಿದ್ಯಾಭ್ಯಾಸಕ್ಕೆ ಕಂಚಿಗೆ ಹೋಗಿ ಅಲ್ಲಿ ತಮಿಳು ಪಲ್ಲವರಿಂದ ಅವಮಾನಿತರಾಗಿ ‘ನಾನು ಒಂದು ಕನ್ನಡ ಸಾಮ್ರಾಜ್ಯವನ್ನು ಕನ್ನಡಿಗರಿಗಾಗಿ ಕಟ್ಟುತ್ತೇನೆ. ನಿಮ್ಮಂತೆ ಆಳುತ್ತೇನೆ’ ಎಂದು ಪ್ರತಿಜ್ಞೆ ಮಾಡಿ ಸಾಮ್ರಾಜ್ಯ ಕಟ್ಟಲು ಬಂದಿದ್ದು, ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ ದಟ್ಟವಾದ ಅಡವಿ ಧವಳಪ್ಪ ಗುಡ್ಡದಲ್ಲಿ ಇಲ್ಲಿನ ಕನ್ನಡಿಗರ ಸಹಾಯದಿಂದ ಸೈನ್ಯಕಟ್ಟಿ ಸಾವಿರಾರು ಸೈನಿಕರನ್ನು ಗೆರಿಲ್ಲಾ ತಂತ್ರದಿAದ ಕಟ್ಟಿಹಾಕಲಾಯಿತು. ಇದರಿಂದಾಗಿ ಕೊನೆಗೆ ಸ್ವತಃ ಪಲ್ಲವರೇ ಇಲ್ಲಿಂದ ಇಲ್ಲಿಯವರೆಗೆ ನಿನ್ನದೇ ರಾಜ್ಯ ಎಂದು ಕೈಯಾರೆ ಕಿರೀಟಧಾರಣೆ ಮಾಡಿದರು ಎಂದು ತಿಳಿಸಿದ ಅವರು, ಅಲ್ಲಿಂದ ಉದಯವಾದ ಕನ್ನಡ ಸಾಮ್ರಾಜ್ಯಕ್ಕೆ ನಂತರ ಕದಂಬ ರಾಜರು ಕನ್ನಡ ಭಾಷೆ, ಸಂಸ್ಕೃತಿ, ಇತಿಹಾಸಕ್ಕೆ ಪ್ರೋತ್ಸಾಹ ನೀಡಿದರು. ಕನ್ನಡ ಲಿಪಿರೂಪ ಪಡೆದು ನಾಡಿನ ಅಭಿವೃದ್ಧಿಯಾಯಿತು. ಇದಕ್ಕೆ ಸಾಕ್ಷಿಯಾಗಿ ಚಂದ್ರವಳ್ಳಿಯ ದೇವಾಲಯದ ಮುಂದೆ ದೊಡ್ಡ ಬರಹದ ಶಾಸನವಿದೆ. ಹಾಗೆಯೇ ಶಾಸನ ಅತ್ಯಂತ ಪ್ರಾಚೀನಕಲೆಯೂ ಇಲ್ಲಿದೆ. ಇದುವರೆಗೆ ದೊರಕಿರುವ ಮೊದಲ ಕನ್ನಡ ಪದ್ಯ, ತಮಟಕಲ್ಲಿನ ಮೊದಲ ಶಾಸನದಲ್ಲಿದೆ. ಗುಣಮಧುರ ಎಂಬ ರಾಜನ ಗುಣಗಾನ ಮಾಡುವ ಈ ಪದ್ಯ ಕನ್ನಡದ ಭಾಷೆಯ ಶ್ರೇಷ್ಠತೆಯ ಉದಾಹಣೆಯಾಗಿದೆ. ಹೀಗೆ ಚಿತ್ರದುರ್ಗ ಜಿಲ್ಲೆಯು ಕನ್ನಡಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ ಎಂಬುದು ಹಾಗೂ ಅದರ ವಾರಸುದಾರರು ನಾವು ಎಂಬುದು ನಮಗೆ ಅಭಿಮಾನ ಪಡುವಂಥದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ: ಚಿತ್ರದುರ್ಗ ನಗರದ ವಾಸವಿ ಸಮೂಹ ಶಾಲೆ, ಪಾರ್ಶ್ವನಾಥ ಶಾಲೆ ಹಾಗೂ ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಸಂಸ್ಕೃತಿ ಹಾಗೂ ಮಹತ್ವ ಸಾರುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೊಳಕಾಲ್ಮುರು ತಾಲ್ಲೂಕಿನ ಸಿದ್ದಯ್ಯನಕೋಟೆ ಪಿ.ಆರ್.ಕಾಂತರಾಜ್ ಸೇರಿದಂತೆ 29 ಮಂದಿ ಸಾಧಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸನ್ಮಾನಿಸಿದರು.
ಕನ್ನಡಾಂಭೆಗೆ ನುಡಿನಮನ: ಕರ್ನಾಟಕಕ್ಕೆ 50ರ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಾಡಿನ ಹೆಸರಾಂತ ಕವಿಗಳು ರಚಿಸಿರುವ ಗೀತೆಗಳನ್ನು ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಕಲಾವಿದರು ಹಾಡಿದರು.
ಕುವೆಂಪು ರಚಿತ “ಎಲ್ಲಾದರು ಇರು ಎಂತಾದರು ಇರು”, ದ.ರಾ.ಬೇಂದ್ರ ರಚಿಸಿರುವ “ಒಂದೇ ಒಂದೇ ಕರ್ನಾಟಕ ಒಂದೇ”, ಸಿದ್ದಯ್ಯ ಪುರಾಣಿಕರು ರಚಿಸಿರುವ “ಹೊತ್ತಿತೋ ಹೊತ್ತಿತು ಕನ್ನಡದ ದೀಪ”, ಚನ್ನವೀರ ಕಣವಿ ಅವರು ಬರೆದಿರುವ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಹಾಗೂ ನಾಗರಹಾವು ಚಲನಚಿತ್ರದ ಕನ್ನಡ ನಾಡಿನ ವೀರರ ಮಣಿಯ ಗೀತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾವಿದ ಮುರಾರ್ಜಿ ಹಾಗೂ ಕಲಾವಿದರು ತಂಡವು ಗೀತ ಗಾಯನ ಪ್ರಸ್ತುತ ಪಡಿಸಿತು.
ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಎಂ ಕಾರಜೋಳ, ಆದಿಜಾಂಬವ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಜಿ.ಎಸ್.ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಾಜ್‌ಪೀರ್, ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತ ರಾಘವೇಂದ್ರ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading