September 14, 2025
1756732033814.jpg




ಚಿತ್ರದುರ್ಗ ಸೆ.01:
ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಶೇ.48 ರಷ್ಟು ಮಳೆಯ ಕೊರತೆಯಾಗಿದೆ. ತಾಲ್ಲೂಕಿನ ಒಟ್ಟು ಕೃಷಿ ಭೂಮಿ ಪೈಕಿ ಶೇ.14.66 ರಷ್ಟು ಮಾತ್ರ ಬಿತ್ತನೆಯಾಗಿದ್ದು, ಬೆಳೆ ವಿಮೆ ತುಂಬಿದ ರೈತರಿಗೆ ನಿಯಮಾನುಸಾರ ಶೇ.25 ರಷ್ಟು ವಿಮಾ ಪರಿಹಾರ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಕೃಷಿ ಇಲಾಖೆ, ವಿಮಾ ಕಂಪನಿ ಹಾಗೂ ರೈತ ಮುಖಂಡರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ತಾಲ್ಲೂಕಿನ 40,510 ಹೆಕ್ಟೇರ್ ಕೃಷಿ ಭೂಮಿ ಪೈಕಿ ಕೇವಲ 5,939 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ ಮಳೆಯಿಂದ ಬಿತ್ತನೆಗೆ ಏನು ಪ್ರಯೋಜನವಾಗಿಲ್ಲ. ಹಿರಿಯೂರಿನ ಕಸಬಾ ಹೋಬಳಿಯಲ್ಲಿ 9,045 ಹೆಕ್ಟೇರ್ ಕೃಷಿ ಭೂಮಿ ಪೈಕಿ 947 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಇದೇ ಮಾದರಿಯಲ್ಲಿ ಐಮಂಗಲ ಹೋಬಳಿಯಲ್ಲಿ 9,385 ಹೆಕ್ಟೇರ್ ಪೈಕಿ 1,748 ಹೆಕ್ಟೇರ್, ಜೆ.ಜಿ.ಹಳ್ಳಿ ಹೋಬಳಿಯಲ್ಲಿ 9,965 ಹೆಕ್ಟೇರ್ ಪೈಕಿ, 1,313 ಹೆಕ್ಟೇರ್, ಧರ್ಮಪುರ ಹೋಬಳಿಯಲ್ಲಿ 12,115 ಹೆಕ್ಟೇರ್ ಪೈಕಿ 2,468 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 9,410 ರೈತರು ನೊಂದಣಿಯಾಗಿದ್ದು, ಸುಮಾರು 1.62 ಕೋಟಿ ವಿಮಾ ಕಂತು ಪಾವತಿಸಿದ್ದಾರೆ. ಸರ್ಕಾರದ ಅಧಿಸೂಚನೆಯಂತೆ ಶೇ.75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡರೆ, ವಿಮಾ ಮೊತ್ತದ ಗರಿಷ್ಠ ಶೇ.25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆ ನೀಡಿ, ಮುಂದಿನ ಅವಧಿ ವಿಮೆಯನ್ನು ರದ್ದು ಪಡಿಸಬೇಕು. ಈ ಹಿನ್ನಲೆಯಲ್ಲಿ ಜಂಟಿ ಸಮೀಕ್ಷೆ ವರದಿಯನ್ನು ಅನುಮೋದಿಸಿ ವಿಮಾ ಕಂಪನಿ ನಷ್ಟ ಪರಿಹಾರ ನೀಡುವಂತೆ ಶಿಫಾರಸ್ಸು ಮಾಡಿರುವುದಾಗಿ ತಿಳಿಸಿದರು.
ವಾಡಿಕೆ ಪ್ರಕಾರ ಹಿರಿಯೂರು ತಾಲ್ಲೂಕಿನಲ್ಲಿ ಜೂನ್ ತಿಂಗಳಿನಲ್ಲಿ 49 ಮಿ.ಮೀ ಮಳೆ ನಿರೀಕ್ಷೆ ಇತ್ತು, ಆದರೆ ವಾಸ್ತವದಲ್ಲಿ ಕೇವಲ 17.5 ಮಿ.ಮೀ ಆಗಿದೆ. ಶೇ.64 ರಷ್ಟು ಮಳೆ ಕೊರತೆಯಾಗಿದೆ. ಇದೇ ರೀತಿ ಜುಲೈ ತಿಂಗಳಿನಲ್ಲಿ 53 ಮಿ.ಮೀ ಮಳೆ ನಿರೀಕ್ಷೆ ಇತ್ತು, ವಾಸ್ತವದಲ್ಲಿ 30 ಮಿ.ಮೀ ಮಳೆಯಾಗಿದ್ದು, ಶೇ.42 ರಷ್ಟು ಮಳೆ ಕೊರತೆಯಾಗಿದೆ. ತಾಲ್ಲೂಕಿನ ಕಸಬಾ ಹಾಗೂ ಐಮಂಗಳ ಹೋಬಳಿಯಲ್ಲಿ ಶೇ.57 ರಷ್ಟು, ಧರ್ಮಪುರ ಹೋಬಳಿಯಲ್ಲಿ ಶೇ.34 ರಷ್ಟು ಹಾಗೂ ಜೆ.ಜಿ.ಹಳ್ಳಿ ಹೋಬಳಿಯಲ್ಲಿ ಶೇ. 63 ರಷ್ಟು ಮಳೆ ಕೊರತೆಯಾಗಿದೆ. ಒಟ್ಟಾರೆ ಹಿರಿಯೂರು ತಾಲ್ಲೂಕಿನಲ್ಲಿ ಈ ವರ್ಷ ಜನವರಿಯಿಂದ ಜುಲೈ ತಿಂಗಳಿನವರೆಗೆ ಶೇ. 23 ರಷ್ಟು ಮಳೆ ಕೊರತೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾಹಿತಿ ನೀಡಿದರು.
ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗನಾಥ, ಕೃಷಿ ವಿಜ್ಞಾನಿ ಓಂಕಾರಪ್ಪ, ದಿ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ವ್ಯವಸ್ಥಾಪಕಿ ಸುಧಿತಾ ಶಾಲಿನಿ, ಸಹಾಯಕ ವ್ಯವಸ್ಥಾಪಕಿ ಕರಪಗವಲ್ಲಿ, ಜಿಲ್ಲಾ ಶಾಖೆಯ ಅರುಣ್ ಕುಮಾರ್, ಅಜಿತ್.ಎಂ.ಆರ್, ರೈತ ಮುಖಂಡರುಗಳಾದ ಕೆ.ಟಿ.ತಿಪ್ಪೇಸ್ವಾಮಿ, ಹಂಪಯ್ಯನ ಮಾಳಗಿ ಧನಂಜಯ, ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹೊರಕೇರಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading