September 14, 2025
1756730360576.jpg



ಚಿತ್ರದುರ್ಗ ಸೆ.01:
ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಹಾಗೂ ಗ್ರಾಮೀಣ ರಸ್ತೆಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ, ಜಂಕ್ಷನ್‍ಗಳಲ್ಲಿ, ತಿರುವುಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳಲ್ಲಿ ಅಗತ್ಯ ಮುಂಜಾಗ್ರತಾ ರಸ್ತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆ ಸುರಕ್ಷಾ ಕ್ರಮಗಳಿಂದ ರಸ್ತೆ ಅಪಘಾತಗಳನ್ನು ತಡೆಯಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮತ್ತು ಗ್ರಾಮೀಣ ರಸ್ತೆಗಳಲ್ಲಿ ಹಾಗೂ ಬ್ಲಾಕ್ ಸ್ಪಾಟ್‍ಗಳಲ್ಲಿ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳಾದ ಸೂಚನಾ ಫಲಕಗಳು, ಹಂಪ್ಸ್, ರಂಬಲ್ ಸ್ಟ್ರೀಪ್ಸ್, ಕ್ಯಾಟ್ ಐಸ್ ಮತ್ತು ಬ್ಲಿಂಕರ್ಸ್ ಅಳವಡಿಕೆ ಸೇರಿದಂತೆ ಅಗತ್ಯ ರಸ್ತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಾಮಗಾರಿ ಬೇಗ ಪ್ರಾರಂಭ ಮಾಡಿ:
ಚಿತ್ರದುರ್ಗ ನಗರದ ಕೆಳಗೋಟೆ ಹೌಸಿಂಗ್ ಬೋರ್ಡ್ ಹತ್ತಿರ ಹೈಮಾಸ್ಟ್ ಲೈಟ್ ಹಾಕಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ಜೆಎಂಐಟಿ ಕಾಲೇಜು ಹತ್ತಿರ ಪಾದಾಚಾರಿ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ಬೇಗ ಪ್ರಾರಂಭ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಚಿತ್ರದುರ್ಗ ನಗರದ ಕೆಳಗೋಟೆ ಹೌಸಿಂಗ್ ಬೋರ್ಡ್ ಹತ್ತಿರ ಸಾರ್ವಜನಿಕ ಸುಗಮ ಸಂಚಾರಕ್ಕೆ ಕ್ಯಾಟ್ ಐ ಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ಜೆಎಂಐಟಿ ಹತ್ತಿರ ಪಾದಾಚಾರಿಗಳಿಗೆ ಸ್ಕೈವಾಕ್ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದ್ದು, ಗುತ್ತಿಗೆದಾರರನ್ನು ನಿಗಧಿಪಡಿಸಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದರು.
ಅನಧಿಕೃತ ಗೂಡಂಗಡಿ ತೆರವುಗೊಳಿಸಿ:
ಹಿರಿಯೂರು ನಗರಕ್ಕೆ ಒಳ ಬರುವ ಮತ್ತು ಹೊರ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಅನಧಿಕೃತ ಅಂಗಡಿಗಳು ಇರುವುದರಿಂದ ಲಾರಿಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ವಾಹನಗಳ ಅಡಚಣೆ ಉಂಟಾಗುತ್ತಿದ್ದು, ಈ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು. ಅದೇ ರೀತಿ ಜಿಲ್ಲಾ ವ್ಯಾಪ್ತಿಯೊಳಗಿನ ರಾಷ್ಟ್ರೀಯ ಹೆದ್ದಾರಿಯ ಟೋಲ್ ಸಂಗ್ರಹಣಾ ಸ್ಥಳಗಳ ಎರಡೂ ಬದಿಗಳಲ್ಲಿ ಅನಧಿಕೃತವಾಗಿ ಗೂಡಂಗಡಿಗಳು ನಿರ್ಮಾಣಗೊಂಡಿದ್ದು, ಇಲ್ಲಿ ಕೂಡ ವಾಹನಗಳು ಪಾರ್ಕಿಂಗ್ ಮಾಡಿ, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿವೆ. ಈ ಅಂಗಡಿಗಳಿಗೆ ಯಾವುದೇ ಅನುಮತಿ ಇಲ್ಲ ಹೀಗಾಗಿ ಕೂಡಲೆ ಇಂತಹ ಅಂಗಡಿಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ರಸ್ತೆ ಬದಿಯಲ್ಲಿ ನಿಲ್ಲಿಸುತ್ತಿರುವ ಲಾರಿಗಳು ಪಾರ್ಕಿಂಗ್ ಮಾಡದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ಉಪ ಸಮಿತಿ ರಚನೆ ಮಾಡಿ, ಪಾರ್ಕಿಂಗ್ ಮಾಡುತ್ತಿರುವ ಲಾರಿಗಳನ್ನು ವಶಪಡಿಸಿಕೊಳ್ಳುವುದು, ಅನಧಿಕೃತ ಅಂಗಡಿಗಳ ಲೈಸೆನ್ಸ್ ಪರಿಶೀಲಿಸಿ, ನೀರು ಮತ್ತು ವಿದ್ಯುತ್ ಸರಬರಾಜು ತಡೆಹಿಡಿಯುವಂತೆ ಅಧಿಕಾರಿಗಳಿಗೆ ತಿಳಿಸಿದರು.
ರಸ್ತೆ ಸುರಕ್ಷಾ ಅನುದಾನಕ್ಕೆ ಮನವಿ ಸಲ್ಲಿಸಿ:
**ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲೆಗೆ ಹೆಚ್ಚಿನ ಅನುದಾನಕ್ಕಾಗಿ ಮನವಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಎರಡ್ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ರಸ್ತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಹೆಚ್ಚಿನ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ನಗರದಲ್ಲಿ ಬಹುಹಂತದ ಪಾರ್ಕಿಂಗ್ ಕಟ್ಟಡಕ್ಕೆ ಡಿಪಿಆರ್ :
** ನಗರದ ಗಾಂಧಿ ವೃತ್ತದ ಬಳಿ ಇರುವ ನಗರಸಭೆಗೆ ಸೇರಿದ ಜಾಗದಲ್ಲಿ ಬಹು ಹಂತದ ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸಲು ಈಗಾಗಲೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಡಿಪಿಆರ್‍ಗೆ ಸರ್ಕಾರದಿಂದ ಅನುಮೋದನೆ ದೊರೆತ ಬಳಿಕ ಇಲ್ಲಿ ಸುಸಜ್ಜಿತ ಬಹುಹಂತದ ಪಾರ್ಕಿಂಗ್ ಸ್ಥಳ ನಿರ್ಮಾಣವಾಗಲಿದೆ. ಸಂತೆಹೊಂಡ ಪಕ್ಕದಲ್ಲಿ ನಿರ್ಮಾಣಗೊಂಡು, ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ, ಇಲ್ಲಿ ನೆಲ ಮಹಡಿಯಲ್ಲಿ ಪಾರ್ಕಿಂಗ್‍ಗೆ ಹಾಗೂ ಮೇಲ್ಭಾಗದಲ್ಲಿ ತರಕಾರಿ ಅಂಗಡಿಗಳಿಗೆ ಮಳಿಗೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ನಗರಸಭೆ ಪೌರಾಯುಕ್ತೆ ರೇಣುಕಾ ಅವರು ಸಭೆಗೆ ಮಾಹಿತಿ ನೀಡಿದರು.
ಡಿವೈಡರ್‍ಗಳ ಸಂಪೂರ್ಣ ವರದಿ ನೀಡಲು ಸೂಚನೆ:
ಚಿತ್ರದುರ್ಗ ನಗರದಲ್ಲಿ ಕೈಗೊಂಡಿರುವ ಪೂರ್ಣಗೊಂಡಿರುವ ಹಾಗೂ ಬಾಕಿ ಇರುವ ಡಿವೈಡರ್‍ಗಳ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಸೂಚಿಸಿದರು.
ತುರುವನೂರು ರಸ್ತೆಯ ಅಂಡರ್ ಪಾಸ್ ಹತ್ತಿರವಿರುವ ಒಳಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಸೂಚಿಸಿದರು.
ಚಿತ್ರದುರ್ಗ ನಗರದ ಬಾಪೂಜಿ ಕಾಲೇಜು ಮುಂಭಾಗ ಪಾದಾಚಾರಿ ಸ್ಕೈವಾಕ್ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಯ ಸಹಕಾರ ಪಡೆದು, ಕಾಮಗಾರಿ ಕೈಗೆತ್ತಿಕೊಳ್ಳುವಂತೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಗುಣಮಟ್ಟದ್ದಾಗಿಲ್ಲ, ವಿಡಿಯೋದಲ್ಲಿ ಕನಿಷ್ಟ ಪಕ್ಷ ವಾಹನದ ನಂಬರ್ ಕೂಡ ಗೋಚರಿಸುವುದಿಲ್ಲ, ಹೀಗಾಗಿ ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಡಿವೈಎಸ್‍ಪಿ ರಾಜಣ್ಣ ಅವರು ಹೇಳಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕೂಡಲೆ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಿತ್ರದುರ್ಗ ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಚಿತ್ರದುರ್ಗ ನಗರಸಭೆಯವರು ನಿರ್ವಹಣೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು. ಚಿತ್ರದುರ್ಗ ನಗರದ ಮಾತ್ರವಲ್ಲದೇ, ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯವರು ಹೇಳಿದ ಕಡೆ ಶಾಶ್ವತವಾಗಿ ಸಿ.ಸಿ.ಕ್ಯಾಮೆರಾ ಅಳವಡಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್. 48ರ ಚಿತ್ರದುರ್ಗದಿಂದ ಬೆಂಗಳೂರು ಕಡೆ ಹೋಗುವ ರಸ್ತೆಯಲ್ಲಿ ಗೊರ್ಲಡಕು ಗೇಟ್ ಜೆ.ಜೆ. ಹಳ್ಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸುಗಮ ಸಂಚಾರಕ್ಕೆ ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಎರಡು ದಿನದೊಳಗೆ ರಸ್ತೆ ಕಾಮಗಾರಿ ಮುಗಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು. ಎರಡು ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರನ್ನು ಅರೆಸ್ಟ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಟೋಲ್ ಸಂಗ್ರಹಣೆ ಕ್ರಮಕ್ಕೆ ಅಸಮಾಧಾನ :
***ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಒಪ್ಪಂದದ ಅನುಸಾರ ಟೋಲ್ ಅನ್ನು ಸಂಗ್ರಹಿಸಲಾಗುತ್ತಿದೆ. ಕೆಲವೆಡೆ ರಸ್ತೆಗಳು ಬಹಳಷ್ಟು ಹಾಳಾಗಿದ್ದು, ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ, ರಸ್ತೆ ಕಾಮಗಾರಿಗಳಿಗಾಗಿ ಮಾರ್ಗ ಬದಲಾಯಿಸಿ, ಸಂಚಾರ ದಟ್ಟಣೆ ಹಾಗೂ ಅಪಘಾತಗಳು ಕೂಡ ಸಂಭವಿಸುತ್ತಿವೆ. ಟೋಲ್ ಸಂಗ್ರಹಣೆ ಕೇಂದ್ರಗಳ ಪೈಕಿ ಅರ್ಧದಷ್ಟು ಕೇಂದ್ರಗಳನ್ನು ಬಂದ್ ಮಾಡಿ, ಕೇವಲ ಒಂದೆರಡು ಕೇಂದ್ರಗಳನ್ನು ಮಾತ್ರ ತೆರೆಯುವುದರಿಂದ, ವಾಹನ ದಟ್ಟಣೆ ಉಂಟಾಗುತ್ತಿದೆ. ವಿಐಪಿ, ಆ್ಯಂಬುಲೆನ್ಸ್ ವಾಹನಗಳು ಸಂಚರಿಸುವ ಮಾರ್ಗದಲ್ಲಿ ಲಾರಿ, ಟ್ರಕ್‍ಗಳು ಕೂಡ ಪ್ರವೇಶ ಮಾಡುತ್ತಿವೆ. ಇದರಿಂದಾಗಿ ವಿಐಪಿ, ಆಂಬುಲೆನ್ಸ್‍ಗಳು ಟೋಲ್ ಮಾರ್ಗ ಪ್ರವೇಶಿಸಲು ಕಾಯುವಂತಹ ಸ್ಥಿತಿ ಇರುತ್ತದೆ. ರಸ್ತೆಗಳು ಸಮರ್ಪಕವಾಗಿ ಇಲ್ಲದೇ ಇರುವ ಸಂದರ್ಭಗಳಲ್ಲಿ ಟೋಲ್ ಸಂಗ್ರಹ ಮಾಡಬಾರದು ಎಂಬುದಾಗಿ ಇತ್ತೀಚೆಗೆ ನ್ಯಾಯಾಲಯ ತೀರ್ಪು ನೀಡಿದೆ. ಹೀಗಿದ್ದಾಗ, ರಸ್ತೆ ಸರಿ ಇಲ್ಲದ ಕಡೆಗಳಲ್ಲಿ ಟೋಲ್ ಏಕೆ ಸಂಗ್ರಹಿಸುತ್ತೀರಿ ಎಂದು ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

12 ಆಟೋ ನಿಲ್ದಾಣ ಕಾಮಗಾರಿ ಪೂರ್ಣ:
ಚಿತ್ರದುರ್ಗ ನಗರದಲ್ಲಿ 27 ಆಟೋ ನಿಲ್ದಾಣಗಳನ್ನು ಗುರುತಿಸಿದ್ದು, ಈಗಾಗಲೇ 12 ಆಟೋ ನಿಲ್ದಾಣ ಕಾಮಗಾರಿಗಳು ಪೂರ್ಣಗೊಂಡಿದ್ದು, ಈ ಬಾಕಿ ಉಳಿದ ಆಟೋ ನಿಲ್ದಾಣ ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದರು.
ರಿಫ್ಲೆಕ್ಟರ್ ಸ್ಟಿಕರ್ ಇಲ್ಲದ ಟ್ರ್ಯಾಕ್ಟರ್‍ಗಳಿಂದ ಅಪಘಾತ :
** ಜಿಲ್ಲೆಯಲ್ಲಿ ಬಹಳಷ್ಟು ಟ್ರ್ಯಾಕ್ಟರ್‍ಗಳಿಗೆ ಪ್ರತಿಫಲನ (ರಿಫ್ಲೆಕ್ಟರ್) ಸ್ಟಿಕರ್ ಅಳವಡಿಸದೇ ಇರುವುದರಿಂದ, ರಾತ್ರಿ ವೇಳೆ ಟ್ರಾಕ್ಟರ್‍ಗಳು ಗೋಚರಿಸದ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಈ ಹಿಂದೆಯೂ ಈ ಬಗ್ಗೆ ಕ್ರಮ ಕೈಗೊಳ್ಳುವುಂತೆ ತಿಳಿಸಲಾಗಿದ್ದರೂ, ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಉತ್ತರಿಸಿದ ಆರ್‍ಟಿಒ ಭರತ್ ಕಾಳೆಸಿಂಗೆ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 25205 ಟ್ರಾಕ್ಟರ್‍ಗಳು ಹಾಗೂ 151 ವಾಣಿಜ್ಯ ಟ್ರ್ಯಾಕ್ಟರ್‍ಗಳು ಇವೆ. ಆರ್‍ಸಿ ಅವಧಿ ಮುಗಿದಿರುವ ಹಳೆ ಟ್ರಾಕ್ಟರ್‍ಗಳು, ನವೀಕರಣಕ್ಕೂ ಬಾರದೆ ಸಂಚರಿಸುತ್ತಿವೆ. ಕೃಷಿ ಉಪಯೋಗಕ್ಕಾಗಿ ಎಂದು ನೊಂದಣಿಯಾಗಿರುವ ಟ್ರ್ಯಾಕ್ಟರ್‍ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿರುವುದು ಕೂಡ ಕಂಡುಬಂದಿದೆ. ಹಂತ ಹಂತವಾಗಿ ಇಂತಹ ಟ್ರ್ಯಾಕ್ಟರ್‍ಗಳನ್ನು ಪತ್ತೆ ಮಾಡಿ, ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ನಾಗರಾಜ್, ನಗರಸಭೆ ಪೌರಾಯುಕ್ತೆ ರೇಣುಕಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading