ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಸಂಭ್ರಮವೂ ವಿಶೇಷ ಆಚರಣೆಯೊಂದಿಗೆ ಅದ್ದೂರಿಯಾಗಿ ನಡೆಯಿತು.


ಶ್ರೀ ವಸಮ್ಮ ತಾಯಿ ಸಮಿತಿ ವತಿಯಿಂದ ಗ್ರಾಮ ದೇವತೆ ಶ್ರೀ ವಸಮ್ಮ ತಾಯಿ ದೇವಸ್ಥಾನದ ಆವರಣದಲ್ಲಿ ಹಾಗೂ ಶ್ರೀ ವಿನಾಯಕ ಮತ್ತು ಬಸವೇಶ್ವರ ಗೆಳೆಯರ ಬಳಗವು ಶ್ರೀ ಮಾರಮ್ಮ ತಾಯಿ ದೇವಸ್ಥಾನದ ಆವರಣದಲ್ಲಿ ದಸರಾ ವೈಭವದಂತೆ ವಿವಿಧ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಜಲ ವೈಭವವನ್ನು ನಿರ್ಮಿಸಿ ಜಗ ಮಗಿಸುವಂತೆ ವಿದ್ಯುತ್ ದೀಪಗಳಿಂದ ಅಲಂಕೃತ ಮಾಡಿ ಯುಗಾದಿ ಹಬ್ಬದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಣೆ ಮಾಡಿದರು.
ಈ ದೇವರ ಕಾರ್ಯದಲ್ಲಿ ಗ್ರಾಮದ ಮಹಿಳೆಯರು, ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ದೇವಸ್ಥಾನಗಳ ಬಳಿ ಭಕ್ತರುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಳವಡಿಸಿದ್ದ ಸರತಿ ಸಾಲುಗಳಲ್ಲಿ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿ ವಿವಿಧ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ಸ್ಥಳಗಳಿಗೆ ತಂಡೋಪ ತಂಡವಾಗಿ ತೆರಳಿ ಅವುಗಳನ್ನು ವೀಕ್ಷಣೆಯ ಮಾಡುವುದರ ಜೊತೆಗೆ ಅಪಾರ ಸಂಖ್ಯೆಯಲ್ಲಿ ಫೋಟೋ ಕ್ಲಿಕ್ಕಿಸಿ ಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ
ಎಚ್.ಎನ್.ವಿಜಯಕುಮಾರ್ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ಮಾತನಾಡಿ ಪ್ರತಿ ವರ್ಷವೂ ಯುಗಾದಿ ಹಬ್ಬದಂದು ಹರದನಹಳ್ಳಿ ಗ್ರಾಮದಲ್ಲಿ ನಮ್ಮೂರಿನ ಉತ್ಸಾಹಿ ಯುವಕರುಗಳು ಒಟ್ಟಾಗಿ ಸೇರಿಕೊಂಡು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವೈಭವದಿಂದ ಯುಗಾದಿ ಹಬ್ಬದ ಸಂಭ್ರಮವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದ ನಮ್ಮೂರಿನ ಯುವಕರು ಇತರೆಡೆಗೆ ಮಾದರಿಯಾಗಿದ್ದು ಪ್ರತಿ ವರ್ಷವೂ ವಿಭಿನ್ನವಾಗಿ ಆಚರಣೆ ಮಾಡುವ ಮೂಲಕ ನಮ್ಮೂರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇಂತಹ ಯುವಕರು ಮಾಡುವ ದೇವತಾ ಕಾರ್ಯ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಹರದನಹಳ್ಳಿ ಗ್ರಾಮದಲ್ಲಿ ನಡೆದ ಯುಗಾದಿ ಹಬ್ಬದ ವೈಭವವನ್ನು ನೋಡಲು ಅಕ್ಕ ಪಕ್ಕದ ಗ್ರಾಮಗಳಿಂದಲೂ ಕೂಡ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಒಂದು ರೀತಿಯ ಮಿನಿ ದಸರದಂತೆ ಕಂಗೊಳಿಸುತ್ತಿದ್ದ ಚಿತ್ರಣಗಳನ್ನು ನೋಡಿ ಕಣ್ ತುಂಬಿಕೊಂಡರು.
ದೇವರ ಕಾರ್ಯದ ನಿಮಿತ್ತ ಭಕ್ತರುಗಳು ಹಾಗೂ ಸಾರ್ವಜನಿಕರುಗಳಿಗೆ ಪಾನಕ ಮತ್ತು ಪ್ರಸಾದವನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜನೆ ಮಾಡಿದ್ದ ಯುವ ಬಳಗಗಳ ವತಿಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್, ಮಹಿಳಾ ಉದ್ಯಮಿ ಸವಿತಾ ವಿಜಯ್, ತಾ.ಪಂ. ಮಾಜಿ ಅಧ್ಯಕ್ಷ ಎಚ್.ಟಿ.ಮಂಜಪ್ಪ ಸೇರಿದಂತೆ ಹಲವು ಗಣ್ಯರುಗಳನ್ನು ಸನ್ಮಾನಿಸಲಾಯಿತು.
ಶ್ರೀ ಆಂಜನೇಯ, ಶ್ರೀ ವೆಂಕಟೇಶ್ವರ, ಪರಮಶಿವ, ಶ್ರೀರಾಮ, ಲಕ್ಷ್ಮಣ, ಸೀತೆ, ಶ್ರೀ ನರಸಿಂಹಸ್ವಾಮಿ, ಕೃಷ್ಣ ಸೇರಿದಂತೆ ವಿವಿಧ ದೇವರುಗಳ ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು ಎಲ್ಲರ ಕಣ್ಮನ ಸೆಳೆಯಿತು.
ಹಬ್ಬದ ಅಂಗವಾಗಿ ಗ್ರಾಮದ ಶ್ರೀ ವಸಮ್ಮತಾಯಿ, ಶ್ರೀ ಗಣೇಶ, ಶ್ರೀ ಮಾರಮ್ಮ ತಾಯಿ, ಶ್ರೀ ಬಸವೇಶ್ವರ, ಶ್ರೀ ಆಂಜನೇಯ ಸ್ವಾಮಿ ದೇವಾಲಯಗಳು ಸೇರಿದಂತೆ ಗ್ರಾಮದೆಲ್ಲೆಡೆ ಇರುವ ವಿವಿಧ ದೇವಸ್ಥಾನಗಳು ಮತ್ತು ಗ್ರಾಮದ ಮುಖ್ಯರಸ್ತೆಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದು ಗ್ರಾಮದಲ್ಲಿ ನಡೆದ ಯುಗಾದಿ ಹಬ್ಬದ ಅದ್ದೂರಿ ವೈಭವಕ್ಕೆ ಸಾಕ್ಷಿಯಾಗಿತ್ತು.
About The Author
Discover more from JANADHWANI NEWS
Subscribe to get the latest posts sent to your email.