March 16, 2026
IMG-20260201-WA0271.jpg

ನೆಲ್ಲಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ
ಚಿತ್ರದುರ್ಗ ತಾಲೂಕಿನ ನೆಲ್ಲಿಕಟ್ಟೆ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿ 75 ವರ್ಷ ತುಂಬಿದ ಸವಿನೆನಪಿಗಾಗಿ ಅಮೃತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಭಾನುವಾರ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಸಂಯೋಜಕರಾದ ಲೋಕೇಶ್ ಅವರು, “ಒಂದು ಪುಟ್ಟ ಗ್ರಾಮದಲ್ಲಿ ಇಂತಹ ಅರ್ಥಪೂರ್ಣ ಹಾಗೂ ಸೊಗಸಾದ ಕಾರ್ಯಕ್ರಮವನ್ನು ನಾನು ಇದೇ ಮೊದಲ ಬಾರಿ ನೋಡುತ್ತಿದ್ದೇನೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈ ಶಾಲೆಯ ಹಿರಿಯ ಸನ್ಮಾನಿತ ಶಿಕ್ಷಕರುಗಳು ತಮ್ಮ ಶಾಲಾ ದಿನಗಳ ಅನುಭವಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು. ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವಾರು ಹಳೆಯ ವಿದ್ಯಾರ್ಥಿಗಳನ್ನು ಗುರುಗಳು ಹಾಗೂ ಶಾಲಾ ಸಮಿತಿಯವರು ಸನ್ಮಾನಿಸಿದರು.
ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ. ರಮೇಶ್ ಸಿ ಅವರು ಮಾತನಾಡಿ, ತಮ್ಮ ಬಾಲ್ಯದ ದಿನಗಳಲ್ಲಿ ಸಾರಿಗೆ ವ್ಯವಸ್ಥೆ, ಹೋಟೆಲ್‌ಗಳು ಹಾಗೂ ನೆಟ್ವರ್ಕ್ ಸೌಲಭ್ಯಗಳಿಲ್ಲದ ಕಾಲದಲ್ಲಿ ಅಕ್ಷರ ಕಲಿಸಿದ ಗುರುಗಳ ಶ್ರಮವನ್ನು ಸ್ಮರಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿ ಜೀವನದಲ್ಲಿ ಸ್ಪಷ್ಟವಾದ ಗುರಿ ಮತ್ತು ಆ ಗುರಿಗೆ ದಾರಿ ತೋರಿಸುವ ಗುರು ಅತ್ಯಂತ ಮುಖ್ಯ. “ಗುರುವಿಗಿಂತಲೂ ನಮ್ಮ ಗುರಿಯೇ ಮುಖ್ಯ” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಜಿಪಿ ತಿಮ್ಮೇಶ್, ಉಪಾಧ್ಯಕ್ಷರಾದ ಸಂತೋಷ್ ಕೆ ಹಾಗೂ ಕೇಶವಮೂರ್ತಿ, ಶ್ರೀನಿವಾಸ ತವಂದಪ್ಪ, ಕರಿಯಪ್ಪ, ರಂಗೇಶ್ ಎಸ್, ಕರಿಚನ್ನಪ್ಪ ಬಿ, ಕಲ್ಲೇಶ್ ಎಚ್.ಆರ್, ಕರಿಯಪ್ಪ ಎನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕರಾದ ವೆಂಕಟೇಶ್ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ದುರುಗೇಶ ಎ ಅವರು ಕಾರ್ಯಕ್ರಮ ನಿರೂಪಣೆ ಮಾಡಿದ್ದು, ಸದಾಶಿವ ಬಿ ಅವರು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ನೆಲ್ಲಿಕಟ್ಟೆ ಹಾಗೂ ಎನ್.ಬಳ್ಳೆಕಟ್ಟೆ ಗ್ರಾಮದ ಮುಖಂಡರು, ಗ್ರಾಮಸ್ಥರು, ಶಾಲೆಯ ಹಾಲಿ ಶಿಕ್ಷಕರು, ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕರು, ಹಳೇ ವಿದ್ಯಾರ್ಥಿಗಳ ಸಂಘದ ಹಾಗೂ ಅಮೃತ ಮಹೋತ್ಸವ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading