ಚಿತ್ರದುರ್ಗಫೆ.01:
ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮುವಾಗ ಸೀನುವಾಗ ಶಿಸ್ತು ಅನುಸರಿಸಿ ರೋಗ ಹರಡದಂತೆ ನೋಡಿಕೊಳ್ಳಿ. ಕ್ಷಯ ಮುಕ್ತ ಭಾರತ ನಮ್ಮೆಲ್ಲರ ಗುರಿಯಾಗಲಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಕ್ಷಯ ಮುಕ್ತ ನೂರು ದಿನಗಳ ಅಭಿಯಾನ ತೀವ್ರ ಪ್ರಚಾರ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷಯ ರೋಗವು ಮೈಕೋ ಬ್ಯಾಕ್ಟೀರಿಯಾ ಟ್ಯೂಬರ್ ಕೀಲೋಸಿಸ್ ಎಂಬ ಸೂಕ್ಷ್ಮರೋಗಾಣುವಿನಿಂದ ಬರುತ್ತದೆ. ಕ್ಷಯ ರೋಗಿಗಳು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ತುಂತುರು ಹನಿಗಳ ಮೂಲಕ ರೋಗಾಣುಗಳು ವಾತಾವರಣದಲ್ಲಿ ಸೇರಿ ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಸೋಂಕು ಉಂಟುಮಾಡುತ್ತದೆ. ಕ್ಷಯರೋಗವನ್ನು ಬೇಗ ಪತ್ತೆ ಹಚ್ಚಿ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಪಡೆಯಿರಿ ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಕ್ಷಯ ಮುಕ್ತ ನೂರು ದಿನಗಳ ಅಭಿಯಾನ 2024ರ ಡಿ.07 ರಿಂದ ಪ್ರಾರಂಭವಾಗಿ 2025ರ ಮಾರ್ಚ್ 24 ರವರೆಗೆ ಜರುಗಲಿದೆ. ಈ ಸಮಯದಲ್ಲಿ ಎಲ್ಲಾ ಗ್ರಾಮಗಳಲ್ಲಿಯೂ ಆಶಾ ಕಾರ್ಯಕರ್ತೆಯರು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳ, ಮನೆ ಮನೆ ಭೇಟಿ ನಡೆಸಿ ಕ್ಷಯರೋಗದ ಬಗ್ಗೆ ಮಾಹಿತಿ ಶಿಕ್ಷಣ ಸಂವಹನ ಜತೆಗೆ ಕರಪತ್ರ ನೀಡುತ್ತಾರೆ. ಈ ಸಂದರ್ಭದಲ್ಲಿ ಕ್ಷಯರೋಗದ ಲಕ್ಷಣಗಳು 14 ದಿನಗಳವರೆಗೂ ಇರುವ ಕೆಮ್ಮು, ಕೆಮ್ಮಿದಾಗ ಕಪದ ಜೊತೆ ರಕ್ತ ಬೀಳುವುದು ತೂಕ ಕಡಿಮೆಯಾಗುವುದು, ಹಸಿವು ಆಗದಿರುವುದು ರಾತ್ರಿಯಲ್ಲೇ ಬೆವರುವುದು, ಈ ತರಹದ ಲಕ್ಷಣಗಳು ಏನಾದರೂ ಕಂಡುಬಂದಲ್ಲಿ ಸಾರ್ವಜನಿಕರು ಹಿಂಜರಿಕೆ, ಸಂಕೋಚವನ್ನು ಬಿಟ್ಟು ತಿಳಿಸಬೇಕು. ಆಗ ಕ್ಷೇತ್ರ ಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವವರು ಉಚಿತವಾಗಿ ನಿಮಗೆ ಕ್ಷಯರೋಗಕ್ಕೆ ಸಂಬಂಧಿಸಿದ ಪರೀಕ್ಷೆಗಳಿಗೆ ಒಳಪಡಿಸಲು ಸಹಕರಿಸುತ್ತಾರೆ. ಅಲ್ಲದೆ ಉಚಿತ ಬಹು ವಿಧ ಔಷಧ ಕೊಡಿಸಲು ಸಹಾಯ ಮಾಡುತ್ತಾರೆ. ಅಗತ್ಯ ವ್ಯಾಯಾಮ, ಪೌಷ್ಟಿಕ ಆಹಾರದ ಸೇವನೆ, ಕ್ಷಯರೋಗದ ವಿರುದ್ಧ ಹೋರಾಡಲು ಪ್ರಬಲ ಅಸ್ತ್ರವಾಗಿದೆ. ತಡ ಮಾಡಬೇಡಿ ರೋಗಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆಗೆ ಒಳಪಡಿರಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯ ರೋಗ ವಿಭಾಗದ ಮೇಲ್ವಿಚಾರಣ ಅಧಿಕಾರಿ ಮಹೇಂದ್ರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಕ್ಷತಾ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೃಷ್ಣಪ್ಪ, ಸಿದ್ದೇಶ್, ಪ್ರವೀಣ್, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಜೆ.ಮಮತಾ, ಸಾರ್ವಜನಿಕರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.